ಸೌದಿಯಲ್ಲಿ ತಲೆ ಮುಚ್ಚಿಕೊಳ್ಳುವ ಬಟ್ಟೆ ಧರಿಸಲು ನಿರಾಕರಿಸಿದ ಜರ್ಮನಿಯ ರಕ್ಷಣಾ ಸಚಿವೆ
ರಿಯಾದ್ , ಡಿ.15: ಸೌದಿ ಅರೇಬಿಯಕ್ಕೆ ಅಧಿಕೃತ ಭೇಟಿಯಲ್ಲಿರುವ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರ ರಕ್ಷಣಾ ಸಚಿವೆ ಉರ್ಸುಲಾ ವೊನ್ ಡೆರ್ ಲಿಯೆನ್ ಸೌದಿ ಸಂಪ್ರದಾಯದಂತೆ ಉಪರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರೊಂದಿಗಿನ ಭೇಟಿಯ ಸಂದರ್ಭ ಅಲ್ಲಿನ ತಲೆ ಮುಚ್ಚಿಕೊಳ್ಳುವ ಬಟ್ಟೆ ಅಬಯ ಧರಿಸಲು ನಿರಾಕರಿಸಿದ್ದಾರೆ. ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಯೂನಿಯನ್ ರಾಜಕಾರಣಿಯಾಗಿರುವ ಈಕೆ ಜರ್ಮನಿಯ ಇತಿಹಾಸದಲ್ಲಿಯೇ ರಕ್ಷಣಾ ಸಚಿವ ಹುದ್ದೆಯೇರಿದ ಪ್ರಥಮ ಮಹಿಳೆಯಾಗಿದ್ದಾರೆ.
‘‘ಯಾವುದೇ ದೇಶದ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಗೌರವಿಸುತ್ತೇನೆ. ಅಲ್ಲಿನ ನಿಯಮಗಳಿಗೆ ಬದ್ಧಳಾಗಿರಲು ಯತ್ನಿಸುತ್ತೇನೆ. ಆದರೆ ಎಲ್ಲದ್ದಕ್ಕೂ ಮಿತಿಯಿದೆ. ನಾನು ಟ್ರೌಸರ್ಸ್ ಧರಿಸುವವಳು. ನನಗೆ ಹೆಡ್ ಸ್ಕಾರ್ಫ್ ಧರಿಸಲು ಸಾಧ್ಯವಿಲ್ಲ,’’ ಎಂದವರು ಹೇಳಿದ್ದಾರೆಂದು ಜರ್ಮನಿಯ ಟ್ಯಾಬ್ಲಾಯ್ಡ್ ಪತ್ರಿಕೆ ಬಿಲ್ಡ್ ಹೇಳಿದೆ. ‘‘ತಾನು ಯಾವ ವಿಧದ ಬಟ್ಟೆ ಧರಿಸಬೇಕೆಂಬುದು ಪ್ರತಿಯೊಬ್ಬ ಪುರುಷ ಹಾಗೂ ಮಹಿಳೆಗೆ ಬಿಟ್ಟ ನಿರ್ಧಾರ. ನನ್ನೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಅಬಯ ಧರಿಸುವಂತೆ ಒತ್ತಾಯಿಸುವುದು ನನಗೆ ಸಿಟ್ಟು ತರಿಸುತ್ತದೆ’’ ಎಂದವರು ಹೇಳಿದ್ದಾರೆ.
ರಿಯಾದ್ ಭೇಟಿಯ ಸಂದರ್ಭ ಲಿಯೆನ್‌ಕಡು ನೀಲಿ ಬಣ್ಣದ ಸೂಟು ಧರಿಸಿದ್ದು ಛಾಯಾಚಿತ್ರಗಳಲ್ಲಿ ಕಂಡು ಬಂದಿದೆ.
ಕಳೆದ ಬುಧವಾರ 58 ವರ್ಷದ ಲಿಯೆನ್ ಮತ್ತಾಕೆಯ ಬಳಗ ರಿಯಾದ್ ಗೆ ಆಗಮಿಸಿದಾಗ ಅಲ್ಲಿನ ಜರ್ಮನ್ ದೂತಾವಾಸ ಕಚೇರಿ ಅವರಿಗೆಲ್ಲಾ ಧರಿಸಲು ಅಬಯ ವಿತರಿಸಿತ್ತೆಂದು ಹೇಳಲಾಗಿದೆ.
ಲಿಯೆನ್ ಅಬಯ ಧರಿಸಲು ನಿರಾಕರಿಸಿದ ಬೆನ್ನಲ್ಲೇ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಬುರ್ಖಾ ನಿಷೇಧಕ್ಕೆ ಕರೆ ನೀಡಿದ್ದಾರೆ.
ಆದರೆ ತಲೆ ಮುಚ್ಚಿಕೊಳ್ಳುವ ಬಟ್ಟೆ ಧರಿಸಲು ನಿರಾಕರಿಸಿದ ಲಿಯೆನ್ ನಿರ್ಧಾರ ಹೆಚ್ಚೇನೂ ವಿವಾದ ಸೃಷ್ಟಿಸಿಲ್ಲ. ಈ ಹಿಂದೆ ಅಮೆರಿಕಾದ ಪ್ರಥಮ ಮಹಿಳೆ ಮಿಶೆಲ್ ಒಬಾಮ, ಏಂಜಲಾ ಮರ್ಕೆಲ್, ಹಿಲರಿ ಕ್ಲಿಂಟನ್, ಕೊಂಡೊಲಿಝಾ ರೈಸ್ ಹಾಗೂ ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಲಾರಾ ಬುಷ್ ಕೂಡ ಸೌದಿ ಭೇಟಿಯ ಸಂದರ್ಭ ತಲೆ ಮುಚ್ಚಿಕೊಳ್ಳುವ ವಸ್ತ್ರ ಧರಿಸಿರಲಿಲ್ಲ.