ಐಎಎಫ್ ಅಧಿಕಾರಿಗಳು ಧಾರ್ಮಿಕ ಕಾರಣಕ್ಕಾಗಿ ಗಡ್ಡ ಬೆಳೆಸುವಂತಿಲ್ಲ:ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಡಿ.15: ಭಾರತೀಯ ವಾಯುಪಡೆಯ ಸಿಬ್ಬಂದಿಗಳು ಧಾರ್ಮಿಕ ಕಾರಣಕ್ಕಾಗಿ ಗಡ್ಡವನ್ನು ಬೆಳೆಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಎತ್ತಿಹಿಡಿದಿದೆ.
ನಿರ್ದಿಷ್ಟ ಸಮುದಾಯದ ಸಿಬ್ಬಂದಿಗಳು ಗಡ್ಡವನ್ನು ಬೆಳೆಸುವುದನ್ನು ನಿರ್ಬಂಧಿಸುವ ಕೇಂದ್ರದ ನಿರ್ಧಾರವು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್ ಠಾಕೂರ್ ನೇತೃತ್ವದ ಪೀಠವು ಹೇಳಿತು.
ದಿಲ್ಲಿ ಉಚ್ಚ ನ್ಯಾಯಾಲಯವು ತಮ್ಮ ಅರ್ಜಿಗಳನ್ನು ವಜಾ ಮಾಡಿದ್ದನ್ನು ಪ್ರಶ್ನಿಸಿ ಐಎಎಫ್‌ನ ಇಬ್ಬರು ಮುಸ್ಲಿಮ್ ಸಿಬ್ಬಂದಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ಪೀಠವು ವಜಾ ಮಾಡಿತು.
ಮುಸ್ಲಿಮ್ ಸಿಬ್ಬಂದಿಗಳು ಗಡ್ಡ ಹೊಂದಿರುವುದನ್ನು ನಿಷೇಧಿಸಿದ್ದ ಐಎಎಫ್‌ನ 2003,ಫೆ.24ರ ಆದೇಶವನ್ನು ಮೊಹಮ್ಮದ್ ಝುಬೈರ್ ಮತ್ತು ಅನ್ಸಾರಿ ಅಫ್ತಾಬ್ ಅಹ್ಮದ್ ಅವರು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದರು.
ಆದೇಶವು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಮತ್ತು 1990,ಜು.18ರಂದು ಗೃಹ ಸಚಿವಾಲಯದ ಮೂಲಕ ಹೊರಡಿಸಲಾಗಿದ್ದ ಸರಕಾರಿ ಪತ್ರಕ್ಕೆ ವಿರುದ್ಧವಾಗಿದೆ ಎಂದು ಝುಬೈರ್ ವಾದಿಸಿದ್ದರು.
ಸಮವಸ್ತ್ರದಲ್ಲಿರುವ ಮುಸ್ಲಿಮ್ ಮತ್ತು ಸಿಖ್ ಸಿಬ್ಬಂದಿಗಳು ಅಧಿಕಾರಿಗಳಿಂದ ಪೂರ್ವಾನುಮತಿ ಪಡೆದುಕೊಂಡು ಧಾರ್ಮಿಕ ಕಾರಣಗಳಿಂದಾಗಿ ಗಡ್ಡವನ್ನು ಹೊಂದಿರಲು ಗೃಹ ಸಚಿವಾಲಯದ ಪತ್ರವು ಅನುಮತಿ ನೀಡಿತ್ತು ಎನ್ನುವುದನ್ನೂ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಪಡೆಯಲ್ಲಿ ಸಾಮರಸ್ಯ ಮತ್ತು ಭದ್ರತಾ ಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಐಎಎಫ್ ಈ ಆದೇಶವನ್ನು ಹೊರಡಿಸಿದೆ ಮತ್ತು ಈ ನೀತಿ ಜಾತ್ಯತೀತ ಸ್ವರೂಪದ್ದಾಗಿದೆ ಎಂದು ಕೇಂದ್ರವು ಹೇಳಿತ್ತು.
ಅರ್ಜಿದಾರರು ಐಎಎಫ್ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಏಕ ನ್ಯಾಯಾಧೀಶರು ಕೆಲವು ಮುಸ್ಲಿಮ್ ಧಾರ್ಮಿಕ ಗ್ರಂಥಗಳನ್ನು ಉಲ್ಲೇಖಿಸಿ ಗಡ್ಡವನ್ನು ಬಿಡುವುದು ಕಡ್ಡಾಯವಲ್ಲ ಎಂದ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಗಳನ್ನು ವಜಾ ಮಾಡಿದ್ದರು.