ಜಯಾ ನಿಧನದ ನಿಗೂಢಕ್ಕೆ ಸ್ಪೋಟಕ ತಿರುವು
ಹೊಸದಿಲ್ಲಿ, ಡಿ. 15 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅನಾರೋಗ್ಯ ಹಾಗು ಸಾವಿನ ಕುರಿತ ವದಂತಿ, ಊಹಾಪೋಹಗಳಿಗೆ ಈಗ ಪುಷ್ಠಿ ದೊರಕುವಂತಹ ಬೆಳವಣಿಗೆಗಳು ನಡೆಯುತ್ತಿವೆ. ಎನ್ಡಿಟಿವಿ ಚಾನೆಲ್ ನ ಸಲಹಾ ಸಂಪಾದಕಿ ಬರ್ಖಾ ದತ್ ಅವರ ಇಮೇಲ್ ಸೋರಿಕೆಯಾಗಿದ್ದು ಇದರಲ್ಲಿ ಜಯಾ ಅನಾರೋಗ್ಯದ ಕುರಿತು ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ.
ಚಾನಲ್ ನ ಉದ್ಯೋಗಿಗಳಿಗೆ ಮತ್ತು ವಿಭಾಗಗಳಿಗೆ ' ಕೇವಲ ಮಾಹಿತಿಗಾಗಿ - ಬಳಕೆಗಲ್ಲ ' ಎಂಬ ಒಕ್ಕಣೆಯೊಂದಿಗೆ ಬರೆದಿರುವ ಈ ಇಮೇಲ್ ನಲ್ಲಿ ಅಪೋಲೋ ಆಸ್ಪತ್ರೆಯ ಆಡಳಿತ ಮಂಡಳಿಯ ಮುಖ್ಯಸ್ಥರ " ಸಹೋದರಿಯೊಬ್ಬರನ್ನು" ಉಲ್ಲೇಖಿಸಿ ಸ್ಪೋಟಕ ಮಾಹಿತಿಯೊಂದನ್ನು ಬರ್ಖಾ ಹಂಚಿಕೊಂಡಿದ್ದಾರೆ. ಆಕೆಗೆ ಸಿಕ್ಕಿದ ಮಾಹಿತಿ ಪ್ರಕಾರ " ಜಯಲಲಿತಾ ಅವರನ್ನು ಅಪೋಲೋಗೆ ತರುವ ಮುನ್ನ ಅವರಿಗೆ ಡಯಾಬಿಟೀಸ್ ಗೆ ತಪ್ಪು ಔಷಧಿಯನ್ನು ನೀಡಲಾಗುತ್ತಿತ್ತು. ಆಸ್ಪತ್ರೆಗೆ ಬಂದ ಮೇಲೆ ಆಕೆಯ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿತ್ತು. ಆದರೆ ಡಿಸೇಂಬರ್ 4 ರಂದು ಆಕೆಗೆ ಹೃದಯ ಸ್ತಂಭಣ ಆದ ಬಳಿಕ ಆಕೆ ಚೇತರಿಸುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ . ಈಗ ಕೇವಲ ಪರಿಸ್ಥಿತಿ ಹಾಗು ಜನರನ್ನು ನಿಯಂತ್ರಿಸಲು ಸಮಯ ದೂಡಲಾಗುತ್ತಿದೆ ". ಈ ಇಮೇಲ್ ಬರ್ಖಾ ಬರೆದಿದ್ದು ಡಿಸೇಂಬರ್ 5 ರಂದು ಬೆಳಗ್ಗೆ . ಅದೇ ದಿನ ತಡ ರಾತ್ರಿ ಜಯಾ ನಿಧನರಾಗಿದ್ದಾರೆ.
ಜಯಲಲಿತಾ ಅವರಿಗೆ ನೀಡಲಾದ ಚಿಕಿತ್ಸೆಯ ಕುರಿತು ರಾಜ್ಯ ಸರಕಾರ ಶ್ವೇತ ಪತ್ರ ಬಿಡುಗಡೆ ಮಾಡಬೇಕೆಂದು ಪ್ರತಿಪಕ್ಷ ಡಿಎಂಕೆ ಹಾಗು ಪಿಎಂಕೆ ಆಗ್ರಹಿಸಿದೆ.
ರಾಹುಲ್ ಗಾಂಧಿ ಮತ್ತಿತರ ಗಣ್ಯರ ಟ್ವಿಟ್ಟರ್ ಖಾತೆ ಹ್ಯಾಕ್ ಮಾಡಿದ ' ಲೀಜನ್ ' ಗ್ರೂಪ್ ಬರ್ಖಾ ದತ್ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿ ಆಕೆಯ ಇಮೇಲ್ ಗಳನ್ನು ಬಹಿರಂಗಪಡಿಸಿದ್ದಾಗಿ ಹೇಳಿತ್ತು. " ಅಪೋಲೋ ಆಸ್ಪತ್ರೆಯ ಸರ್ವರ್ ಗಳನ್ನೂ ನಾವು ಹ್ಯಾಕ್ ಮಾಡಿದ್ದು ಅದರ ವಿವರ ಬಹಿರಂಗಪಡಿಸಿದರೆ ಭಾರತದಲ್ಲಿ ಅಲ್ಲೋಲಕಲ್ಲೋಲ ಆಗಬಹುದು" ಎಂದು ಈ ಗ್ರೂಪ್ ವಾಷಿಂಗ್ಟನ್ ಪೋಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು ಗಮನಾರ್ಹವಾಗಿದೆ.