ನೋಟು ರದ್ದತಿ : ಜನರಿಗೆ ಲಾಡು ಹಂಚುವ ಬಿಜೆಪಿ ಯೋಜನೆಗೆ ಆರೆಸ್ಸೆಸ್ ಬ್ರೇಕ್
ಹೊಸದಿಲ್ಲಿ, ಡಿ. 15 : ನೋಟು ರದ್ದತಿ ಯೋಜನೆಗೆ ಜನರು ನೀಡಿರುವ ' ಅಭೂತಪೂರ್ವ ಬೆಂಬಲಕ್ಕೆ ' ಪ್ರತಿಯಾಗಿ ಲಾಡು ಹಂಚಲು ಹೊರಟ ದಿಲ್ಲಿ ಬಿಜೆಪಿ ಘಟಕಕ್ಕೆ ತೀವ್ರ ಮುಖಭಂಗವಾಗಿದೆ. ಈ ಲಾಡು ಹಂಚುವ ಯೋಜನೆಗೆ ಬ್ರೇಕ್ ಹಾಕಿರುವ ಆರೆಸ್ಸೆಸ್ ಮೊದಲು ಜನರ ಮೂಡ್ ಹೇಗಿದೆ ಎಂದು ಸರಿಯಾಗಿ ತಿಳಿದುಕೊಳ್ಳಿ ಎಂದು ಖಾರವಾಗಿಯೇ ಸಲಹೆ ನೀಡಿದೆ. ಜೊತೆಗೆ ಲಾಡು ಹಂಚಲು ಮನೆಮನೆಗೆ ಹೋದ ಬಿಜೆಪಿ ಮುಖಂಡರಿಗೆ ಕೆಲವೆಡೆ ಜನರು ಸ್ವೀಕರಿಸಲು ನಿರಾಕರಿಸಿ, ನಮ್ಮ ಹಣ ನಾವು ಪಡೆಯಲು ಬ್ಯಾಂಕ್ ಕ್ಯೂ ನಲ್ಲಿ ನಿಂತು ಸಾಕಾಗಿದೆ ಎಂದು ಹೇಳಿ ವಾಪಸ್ ಕಳುಹಿಸಿದ ಘಟನೆಯೂ ನಡೆದಿದೆ.
ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ , ಸಂಸದ ಮನೋಜ್ ತಿವಾರಿ ಅವರು ಈ ಐಡಿಯಾ ಮಾಡಿದ್ದರು. ಆದರೆ ಡಿಸೇಂಬರ್ ಅಂತ್ಯದವರೆಗೆ ಕಾದು ಬಳಿಕ ಜನರ ಪರಿಸ್ಥಿತಿ ಹಾಗು ಮೂಡ್ ನೋಡಿಕೊಂಡು ಬಿಜೆಪಿ ಇಂತಹ ಕೆಲಸಕ್ಕೆ ಕೈ ಹಾಕಬೇಕು ಎಂದು ಆರೆಸ್ಸೆಸ್ ಸ್ಪಷ್ಟವಾಗಿ ಹೇಳಿದೆ. ಕೆಲವೆಡೆ ಬಿಜೆಪಿ ಕಾರ್ಯಕರ್ತರು ಲಾಡು ಹಂಚಲು ಹೊರಟರೂ ಬಳಿಕ ಅದನ್ನು ಕೈಬಿಡಲಾಯಿತು.