ಪೆರಿಯಡ್ಕ: ಮಗನ ಆತ್ಮಹತ್ಯೆಯಿಂದ ನೊಂದು ತಾಯಿ ಆತ್ಮಹತ್ಯೆ

Update: 2016-12-15 18:47 GMT

ಉಪ್ಪಿನಂಗಡಿ, ಡಿ.15: ಮಗ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ನೊಂದ ತಾಯಿಯೋರ್ವರು ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಪ್ಪಿನಂಗಡಿ ಗ್ರಾಮದ ಪೆರಿಯಡ್ಕದ ಬೊಳ್ಳಾವು ಎಂಬಲ್ಲಿ ನಡೆದಿದೆ.

ಬೊಳ್ಳಾವು ನಿವಾಸಿ ದಿ.ತಿಮ್ಮಪ್ಪ ಗೌಡರ ಪುತ್ರ ರಾಮಚಂದ್ರ ಯಾನೆ ರಮೇಶ(38) ಹಾಗೂ ಅವರ ತಾಯಿ ಸೇಸಮ್ಮ(62) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ರಾಮಚಂದ್ರ ತನ್ನ ಮನೆ ಬಳಿಯ ಶೆಡ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆನ್ನಲಾಗಿದೆ. ತೀರಾ ಅಸ್ವಸ್ಥರಾಗಿದ್ದ ಅವರನ್ನು ಸಂಜೆ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10:30ರ ಸುಮಾರಿಗೆ ಮೃತಪಟ್ಟಿದ್ದರು. ಆಸ್ಪತ್ರೆಯಲ್ಲಿ ಮಗನೊಂದಿಗಿದ್ದ ತಾಯಿ ಸೇಸಮ್ಮ ರಾತ್ರಿ 11:30ರ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಬಂದು, ‘‘ಕೆಲಸದ ವಿಷಯದಲ್ಲಿ ತನ್ನ ಮಗ ಹಾಗೂ ಸೊಸೆಗೆ ಮನೆಯಲ್ಲಿ ದಿನ ನಿತ್ಯ ಜಗಳಗಳಾಗುತ್ತಿದ್ದು, ಇದರಿಂದನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’’ಎಂದು ಹೇಳಿಕೆ ನೀಡಿದ್ದಾರೆನ್ನಲಾಗಿದೆ. ನಂತರ ಮನೆಗೆ ತೆರಳಿ ಮಲಗಿದ್ದ ಇವರು ಗುರುವಾರ ಬೆಳಗ್ಗೆ 7:30ರ ಸುಮಾರಿಗೆ ಸೊಸೆ ನೋಡಿದಾಗ ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿದ್ದರು. ಕೂಡಲೇ ಸ್ಥಳೀಯರ ನೆರವಿನಿಂದ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ‘‘ಮಗನ ಸಾವಿನಿಂದ ನೊಂದ ಅತ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’’ ಎಂದು ಸೊಸೆ ವಸಂತಿ ನೀಡಿದ ಹೇಳಿಕೆಯನ್ನು ಉಪ್ಪಿನಂಗಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಗುರುವಾರ ತಾಯಿ-ಮಗನ ಮೃತದೇಹಗಳನ್ನು ಪುತ್ತೂರು ಸರಕಾರಿಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮನೆಗೆ ತಂದು ಅಕ್ಕಪಕ್ಕದಲ್ಲೇ ಚಿತೆ ನಿರ್ಮಿಸಿ ತಾಯಿ-ಮಗನ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು.

 ಕೆಲ ದಿನಗಳಿಂದ ನೊಂದಿದ್ದ ರಾಮಚಂದ್ರ: ಯಾರ ತಂಟೆಗೂ ಹೋಗದೆ ತಾನಾಯಿತು, ತನ್ನ ಕೆಲಸವಾಯಿತು ಎಂದು ಬದುಕುತ್ತಿದ್ದ ರಾಮಚಂದ್ರ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದು, ಕೆಲವು ವರ್ಷಗಳ ಹಿಂದೆ ಯಾವುದೋ ಕಾರಣದಿಂದ ವಿಪರೀತ ಮದ್ಯವ್ಯಸನಿಯಾಗಿದ್ದರೆನ್ನಲಾಗಿದೆ. ನಂತರ ಮನಪರಿವರ್ತನೆಗೊಂಡು ಮದ್ಯಸೇವನೆಯನ್ನು ಸಂಪೂರ್ಣ ನಿಲ್ಲಿಸಿ ಗಾರೆ ಕೆಲಸದೊಂದಿಗೆ ಮನೆಯಲ್ಲಿದ್ದ ಕೃಷಿಯನ್ನೂ ಅಭಿವೃದ್ಧಿಪಡಿಸಿದ್ದರೆಂದು ತಿಳಿದು ಬಂದಿದೆ. ಆದರೆ ಹಲವು ವರ್ಷಗಳ ಬಳಿಕ ಕಳೆದ 15ದಿನಗಳಿಂದ ಜೀವನದಲ್ಲಿ ನೊಂದ ಅವರು ಮತ್ತೆ ಮದ್ಯಸೇವನೆ ಆರಂಭಿಸಿದ್ದರೆಂದು ತಿಳಿದು ಬಂದಿದೆ.

ಬುಧವಾರ ಕೆಲಸಕ್ಕೆ ರಜೆ ಹಾಕಿ, ಸಹೋದ್ಯೋಗಿಗಳನ್ನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬೈಕ್‌ನಲ್ಲಿ ಬಿಟ್ಟಿದ್ದು, ಅವರು ಬೈಕ್ ಇಳಿಯುವಾಗ ‘‘ನನ್ನ ಬೈಕ್‌ನಲ್ಲಿ ನೀವು ಬರುವುದು ಇದೇ ಕೊನೆ’’ಎಂದಿದ್ದರೆಂದು ತಿಳಿದು ಬಂದಿದೆ. ನಂತರ ಮನೆಗೆ ಬಂದು ಅವರು ಆತ್ಮಹತ್ಯೆಮಾಡಿಕೊಂಡಿದ್ದಾರೆನ್ನಲಾಗಿದೆ.

ಮೃತ ರಾಮಚಂದ್ರನ ಪತ್ನಿ ವಸಂತಿ ಗ್ರಾಮಾಭಿವೃದ್ಧಿ ಸಂಸ್ಥೆಯೊಂದರಲ್ಲಿ ಸೇವಾನಿರತೆ ಯಾಗಿ ಕೆಲಸ ಮಾಡುತ್ತಿದ್ದು, ಕೆಲಸದ ವಿಷಯವಾಗಿ ಪತಿ-ಪತ್ನಿಗೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. ಇದುವೇ ಅವರು ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News