ಅಲೆಪ್ಪೊ ನಾಗರಿಕರ ತೆರವು ಕಾರ್ಯಾಚರಣೆಗೆ ತಡೆ: ವಿಶ್ವಸಂಸ್ಥೆ
ಜಿನೇವ, ಡಿ. 16: ಅಲೆಪ್ಪೊದ ಪೂರ್ವದ ಪ್ರದೇಶಗಳಿಂದ ಗಾಯಗೊಂಡವರು ಮತ್ತು ನಾಗರಿಕರನ್ನು ಹೊರಸಾಗಿಸುವ ಕಾರ್ಯಕ್ಕೆ ಶುಕ್ರವಾರ ತಡೆಯೊಡ್ಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ಈ ಪ್ರದೇಶಗಳಿಂದ ಹೊರಹೋಗುವಂತೆ ನೆರವು ಸಂಘಟನೆಗಳು ಮತ್ತು ವಾಹನಗಳಿಗೆ ಸೂಚನೆ ನೀಡಲಾಗಿದೆ ಹಾಗೂ ಇದಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ ಎಂದು ಪಶ್ಚಿಮ ಅಲೆಪ್ಪೊದಿಂದ ಮಾತನಾಡಿದ ಸಿರಿಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಎಲಿಝಬೆತ್ ಹಾಫ್ ಜಿನೇವದಲ್ಲಿ ನಡೆದ ಪತ್ರಿಕಾಗೋಷ್ಠಿಗೆ ತಿಳಿಸಿದರು.
‘‘ಈ ಪ್ರದೇಶಗಳ ಉಸ್ತುವಾರಿ ಹೊತ್ತಿರುವ ರಶ್ಯನ್ನರಿಂದ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸೂಚನೆ ಬಂದಿದೆ ಎಂದು ನನಗನಿಸುತ್ತದೆ’’ ಎಂದರು.
ಪೂರ್ವ ಅಲೆಪ್ಪೊದಲ್ಲಿ ಈಗಲೂ 50,000 ಮಂದಿ
ಪ್ಯಾರಿಸ್, ಡಿ. 16: ಹೆಚ್ಚಿನ ನಾಗರಿಕರು ಸೇರಿದಂತೆ ಸುಮಾರು 50,000 ಜನರು ಈಗಲೂ ಮುತ್ತಿಗೆಗೊಳಗಾದ ಪೂರ್ವ ಅಲೆಪ್ಪೊದಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಸಿರಿಯಕ್ಕಾಗಿನ ವಿಶ್ವಸಂಸ್ಥೆಯ ಶಾಂತಿ ಪ್ರತಿನಿಧಿ ಸ್ಟಾಫನ್ ಡಿ ಮಿಸ್ಟುರ ಮತ್ತು ಫ್ರಾನ್ಸ್ ವಿದೇಶ ಸಚಿವ ಜೀನ್-ಮಾರ್ಕ್ ಅಯ್‌ರಾಲ್ಟ್ ಗುರುವಾರ ಹೇಳಿದ್ದಾರೆ.
‘‘40,000 ನಾಗರಿಕರು ಸೇರಿದಂತೆ 50,000 ಜನರು ಪೂರ್ವ ಅಲೆಪ್ಪೊದಲ್ಲಿ ಈಗಲೂ ಸಿಕ್ಕಿಹಾಕಿಕೊಂಡಿದ್ದಾರೆ. ಉಳಿದವರು 1,500ರಿಂದ 5,000ವರೆಗಿರುವ ಬಂಡುಕೋರರು ಮತ್ತು ಅವರ ಕುಟುಂಬ ಸದಸ್ಯರು’’ ಎಂದು ಪ್ಯಾರಿಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.