×
Ad

ಹೆದ್ದಾರಿಯಲ್ಲಿನ್ನು ಮದ್ಯ ಮಾರಾಟವಿಲ್ಲ!!!

Update: 2016-12-16 20:39 IST

ದೇಶದಾದ್ಯಂತ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇದಿಸಿ ಆದೇಶವೊಂದನ್ನು ಸುಪ್ರಿಂ ಕೋರ್ಟ್ ಹೊರಡಿಸಿದೆ.  ಮದ್ಯ ಸೇವಿಸಿ ವಾಹನ ಚಲಾಯಿಸುವುದು ಮೋಟಾರು ವಾಹನ ಕಾಯ್ದೆಯಡಿ ಅಪರಾಧವಾದರೂ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷ ಜನ ಅಪಘಾತದಲ್ಲಿ ಮರಣ ಹೊಂದುತ್ತಿರುವ ಹಿನ್ನೆಲೆಯಲ್ಲಿ ಸ್ವಯಂಸೇವಾ ಸಂಸ್ಥೆಯೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸುಪ್ರೀಂ ಗೆ ಸಲ್ಲಿಸಿತ್ತು. ಮದ್ಯ ಸೇವಿಸಿ ವಾಹನ ಚಲಾಯಿಸುವುದರಿಂದ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಸುಪ್ರೀಂನ ಈ ಆದೇಶದನ್ವಯ ಈಗ ಚಾಲ್ತಿಯಲ್ಲಿರುವ ಮದ್ಯದಂಗಡಿಗಳ ಪರವಾನಿಗೆಯು ನವೀಕರಿಸಬೇಕಾದರೆ ಅದು ರಾಜ್ಯ ಮತ್ತು ರಾಷ್ತ್ರೀಯ ಹೆದ್ದಾರಿಗಳಿಂದ ಕನಿಷ್ಠ ಐನೂರು ಮೀಟರ್ ದೂರ ಇರಬೇಕು. ಮದ್ಯ ಮಾರಾಟ ಕೇಂದ್ರಗಳ ಲೈಸೆನ್ಸ್ ಪ್ರತಿ ವರ್ಷ ಮಾರ್ಚ್ 31 ಕ್ಕೆ ನವೀಕರಿಸಬೇಕಾಗುತ್ತದೆ. ಆದುದರಿಂದ 2017ರ ಎಪ್ರಿಲ್ 1 ರಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಪಕ್ಕ ಮದ್ಯ ಅಲಭ್ಯವಾಗಲಿದೆ.

ಈ ಆದೇಶದಿಂದ ಮದ್ಯ ಮಾರಾಟ ಹಾಗೂ ಸರಕಾರದ ಆದಾಯ ಇಳಿಮುಖವಾಗಲಿದೆ. ಆದೇಶ ಹೊರಟ ಕೆಲವೇ ಗಂಟೆಗಳಲ್ಲಿ ಮದ್ಯ ತಯಾರಕ ಸಂಸ್ಥೆಗಳ ಶೇರುಗಳ ಮಾರುಕಟ್ಟೆ ಬೆಲೆ ಇಳಿದಿದೆ. ಕಳೆದ ಹತ್ತು ವರ್ಷಗಳಿಂದ ಈ ವಿಷಯದ ಬಗ್ಗೆ ದಿಟ್ಟ ಹೆಜ್ಜೆ ಇಡುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ಹೇಳುತ್ತಲೇ ಇದ್ದರೂ ಸರಕಾರಗಳು ಯಾವುದೇ ಕ್ರಮ ಕೈಗೊಂಡಿರದೆ ಇರುವ ಬಗ್ಗೆ ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿದೆ. ಮದ್ಯ ಮಾರಾಟದ ಜೊತೆಯಲ್ಲೇ ಮದ್ಯ ತಯಾರಕರು ಜಾಹೀರಾತುಗಳನ್ನು ಹೆದ್ದಾರಿಗಳಲ್ಲಿ ಪ್ರದರ್ಶಿಸುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ಮದ್ಯಪಾನ ಮಾಡಬೇಕಾದರೆ ಇನ್ನು ಮುಂದೆ ಅರ್ಧ ಕಿಲೋಮೀಟರ್ ಹೆಚ್ಚು ‘ತೀರ್ಥಯಾತ್ರೆ’ ಮಾಡಬೇಕಾಗುತ್ತದೆ.

Writer - ರಾಜೇಂದ್ರ ಪೈ

contributor

Editor - ರಾಜೇಂದ್ರ ಪೈ

contributor

Similar News