ರಾಜಕೀಯ ಪಕ್ಷಗಳಿಗೆ ಹೊಸ ವಿನಾಯಿತಿ ಪ್ರಕಟಿಸಿದ ಕೇಂದ್ರ ಸರ್ಕಾರ

Update: 2016-12-16 17:06 GMT

ಹೊಸದಿಲ್ಲಿ, ಡಿ.16: ಕಠಿಣ ಕಾನೂನುಗಳ ಮೂಲಕ ಕಾಳಧನಿಕರ ಬೆಂಡೆತ್ತಲು ಕೇಂದ್ರ ಸರಕಾರ ಮುಂದಾಗಿರುವಂತೆಯೇ, ರಾಜಕೀಯ ಪಕ್ಷಗಳ ಹೆಸರಿನಲ್ಲಿ ಅಕ್ರಮ ಹಣವನ್ನು ತಡೆಗಟ್ಟುವ ಸೂಕ್ತ ಕ್ರಮವೊಂದನ್ನು ಜಾರಿಗೆ ತರಲು ಪ್ರಯಾಸ ಪಡುತ್ತಿದೆ.

ರಾಜಕೀಯ ಪಕ್ಷಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳಲ್ಲಿ ಇಡುವ ಠೇವಣಿಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲವಾಸ ತಿಳಿಸಿದ್ದಾರೆ. ಸರಳವಾಗಿ ಹೇಳುವುದಾದರೆ, ರಾಜಕೀಯ ಪಕ್ಷಗಳು ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರೆ ಈ ಬಗ್ಗೆ ಯಾವುದೇ ಪರಿಶೀಲನೆ ನಡೆಸಲಾಗುವುದಿಲ್ಲ ಎಂದು ಸರಕಾರ ತಿಳಿಸಿದಂತಾಗಿದೆ.

ಪಕ್ಷದ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗಳಲ್ಲಿ ಹಣ ಠೇವಣಿ ಇಟ್ಟರೆ ತೆರಿಗೆ ವಿನಾಯಿತಿ ಇದೆ. ಆದರೆ ವೈಯಕ್ತಿಕವಾಗಿ ಇಡುವ ಠೇವಣಿಗಳು ಸರಕಾರದ ‘ರಾಡಾರ್’ನಿಂದ ತಪ್ಪಿಸಿಕೊಳ್ಳಲಾರವು. ವೈಯಕ್ತಿಕವಾಗಿ ಇಡಲಾಗುವ ಎಲ್ಲಾ ಠೇವಣಿಗಳ ಮಾಹಿತಿಯೂ ಸರಕಾರಕ್ಕೆ ದೊರಕುತ್ತದೆ ಎಂದು ಆದಾಯ ಇಲಾಖೆಯ ಕಾರ್ಯದರ್ಶಿ ಹಸ್‌ಮುಖ್ ಅಧಿಯಾ ಹೇಳಿದ್ದಾರೆ.

ಆದಾಯತೆರಿಗೆ ಕಾಯ್ದೆಯ ಸೆಕ್ಷನ್ 13ಎ ಪ್ರಕಾರ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆಸ್ತಿ ಅಥವಾ ಇತರ ಮೂಲಗಳಿಂದ , ವೈಯಕ್ತಿಕ ದೇಣಿಗೆ ಮುಂತಾದವುಗಳಿಂದ ಬರುವ ಆದಾಯ ಇದರಲ್ಲಿ ಸೇರಿದೆ. ಇಲ್ಲಿ ಯಾವುದೇ ಆರ್ಥಿಕ ಮಿತಿ ಇರುವುದಿಲ್ಲ. ಹೀಗೆ ತೆರಿಗೆ ವಿನಾಯಿತಿ ಪಡೆಯುವ ಆದಾಯದ ಮೊತ್ತವನ್ನು ರಾಜಕೀಯ ಪಕ್ಷಗಳ ಆದಾಯ ಲೆಕ್ಕಹಾಕುವ ವೇಳೆ ಪರಿಗಣಿಸುವಂತಿಲ್ಲ. ಆದರೆ ರಾಜಕೀಯ ಪಕ್ಷಗಳು ತಮ್ಮ ಲೆಕ್ಕಪತ್ರವನ್ನು ಚಾರ್ಟರ್ಡ್ ಅಕೌಂಟೆಂಟ್ ಬಳಿ ಪರಿಶೋಧನೆ ನಡೆಸಿದರೆ ಮಾತ್ರ ಈ ತೆರಿಗೆ ವಿನಾಯಿತಿ ಸೌಲಭ್ಯ ಲಭ್ಯವಾಗುತ್ತದೆ.

ಕೃಷಿಕರು ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಸಂದರ್ಭ, ತನ್ನ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಇರುವುದಾಗಿ ಫಾರ್ಮ್ 60ರಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಕೃಷಿಕರು ಫಾರ್ಮ್ 60 ನೀಡಿದರೆ, ಪಾನ್ ಕಾರ್ಡ್‌ನ ಅಗತ್ಯವಿಲ್ಲ ಎಂದು ಹಸ್‌ಮುಖ್ ಅಧಿಯಾ ತಿಳಿಸಿದ್ದಾರೆ. ತೆರಿಗೆ ಅಧಿಕಾರಿಗಳು 2.5 ಲಕ್ಷ ರೂ.ಗಿಂತ ಕಡಿಮೆ ಇರುವ ಠೇವಣಿಗಳ ಬಗ್ಗೆ ಅನಗತ್ಯವಾಗಿ ಪರಿಶೀಲನೆ ನಡೆಸಬಾರದು ಎಂದವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News