ಸೆಮಿಫೈನಲ್‌ನಲ್ಲಿ ಎಡವಿದ ಸಿಂಧು

Update: 2016-12-17 15:44 GMT

ದುಬೈ, ಡಿ.17: ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಪಿ.ವಿ. ಸಿಂಧು ಬಿಡಬ್ಲುಎಫ್ ಸೂಪರ್ ಸಿರೀಸ್ ಮಾಸ್ಟರ್ಸ್‌ ಫೈನಲ್ಸ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ಸೋತಿದ್ದಾರೆ.

 ಶನಿವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸೆಮಿ ಫೈನಲ್‌ನಲ್ಲಿ ಸಿಂಧು ಕೊರಿಯಾದ ಆಟಗಾರ್ತಿ ಸಂಗ್ ಜೀ ಹ್ಯೂನ್ ವಿರುದ್ಧ 15-21, 21-18, 15-21 ಗೇಮ್‌ಗಳ ಅಂತರದಿಂದ ಶರಣಾದರು. ವರ್ಷದ ಕೊನೆಯ ಪ್ರತಿಷ್ಠಿತ ಟೂರ್ನಿಯಲ್ಲಿ ಫೈನಲ್‌ಗೆ ತಲುಪುವ ಅಪೂರ್ವ ಅವಕಾಶದಿಂದ ವಂಚಿತರಾದರು.

 ಕೊರಿಯ ಆಟಗಾರ್ತಿ ಮೊದಲ ಪಂದ್ಯವನ್ನು ಕೇವಲ 21 ನಿಮಿಷಗಳಲ್ಲಿ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಮೊದಲ ಗೇಮ್‌ನಲ್ಲಿ ದಣಿದವರಂತೆ ಕಂಡುಬಂದಿದ್ದ ಸಿಂಧು ಎರಡನೆ ಗೇಮ್‌ನ್ನು 29 ನಿಮಿಷಗಳಲ್ಲಿ 21-18 ರಿಂದ ಗೆಲ್ಲುವ ಮೂಲಕ ತಿರುಗೇಟು ನೀಡಿ ಪಂದ್ಯವನ್ನು 3ನೆ ಹಾಗೂ ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.

ಮೂರನೆ ಗೇಮ್‌ನ ಆರಂಭದಲ್ಲೇ ಮೇಲುಗೈ ಸಾಧಿಸಿದ ಸಂಗ್ 29 ನಿಮಿಷಗಳಲ್ಲಿ 21-15 ರಿಂದ ಜಯ ಸಾಧಿಸಿ ಫೈನಲ್‌ಗೆ ಲಗ್ಗೆ ಇಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News