×
Ad

ಸೇನಾ ವರಿಷ್ಠರ ನೇಮಕ: ಇಬ್ಬರು ಹಿರಿಯರನ್ನು ಕಡೆಗಣಿಸಿದ ಕೇಂದ್ರ

Update: 2016-12-18 10:51 IST

ಹೊಸದಿಲ್ಲಿ: ಭಾರತೀಯ ಸೇನೆಯ ಮುಖ್ಯಸ್ಥರ ಆಯ್ಕೆಯಲ್ಲಿ ಸೇವಾ ಜೇಷ್ಠತೆಯನ್ನು ಗಾಳಿಗೆ ತೂರಿದ ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಅವರನ್ನು ಮುಂದಿನ ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಿದೆ. ಸೇವಾಜೇಷ್ಠತೆ ಹೊಂದಿದ್ದ ಇಬ್ಬರು ಲೆಫ್ಟಿನೆಂಟ್ ಗವರ್ನರ್‌ಗಳನ್ನು ಕಡೆಗಣಿಸಿ ಈ ನೇಮಕ ಮಾಡಿರುವ ಕ್ರಮ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡಿಸೆಂಬರ್ 31ರಂದು ನಿವೃತ್ತರಾಗಲಿರುವ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರ ಉತ್ತರಾಧಿಕಾರಿಯಾಗಿ ಬಿಪಿನ್ ರಾವತ್ ನೇಮಕಗೊಂಡಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ (ಇನ್‌ಫ್ಯಾಂಟ್ರಿ) ಅವರು ಸೇನೆಯ ಉಪ ಮುಖ್ಯಸ್ಥರಾಗಿ 2016ರ ಸೆಪ್ಟಂಬರ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದರು. ಇವರನ್ನು ನೇಮಕ ಮಾಡುವಲ್ಲಿ ಪೂರ್ವ ಕಮಾಂಡ್‌ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪ್ರವೀಣ್ ಬಕ್ಷಿ (ಸಶಸ್ತ್ರ ಪಡೆ) ಹಾಗೂ ದಕ್ಷಿಣ ಸೇನಾ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಪಿ.ಎಂ.ಹ್ಯಾರಿಸ್ (ಯಾಂತ್ರೀಕೃತ ಇನ್‌ಫ್ಯಾಂಟ್ರಿ) ಅವರ ಸೇವಾ ಜೇಷ್ಠತೆಯನ್ನು ಕಡೆಗಣಿಸಲಾಗಿದೆ.

ಮುಂದಿನ ಮುಖ್ಯಸ್ಥರ ಆಯ್ಕೆ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರವಾಗಿದ್ದರೂ, ಜೇಷ್ಠತೆ ಮಾನದಂಡವನ್ನು ಸಾಮಾನ್ಯವಾಗಿ ಪಾಲಿಸಲಾಗುತ್ತದೆ. ಸೇವಾಜೇಷ್ಠತೆಯಿಂದ ವಂಚಿತರಾದ ಇಬ್ಬರು ಸೇನಾ ಮುಖಂಡರು ಪ್ರತಿಭಟನಾರ್ಥವಾಗಿ ಹುದ್ದೆ ತ್ಯಜಿಸುತ್ತಾರೆಯೇ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸಿನ್ಹಾ ಅವರು, ತಮಗಿಂತ ಕಿರಿಯರಾದ 1983ರಲ್ಲಿ ಜನರಲ್ ಎ.ಎಸ್.ವೈದ್ಯ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಿದ್ದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು.

 ಆದರೆ ವಾಯುಪಡೆಯ ಮುಂದಿನ ಮುಖ್ಯಸ್ಥರ ನೇಮಕಾತಿಯಲ್ಲಿ ಸರ್ಕಾರ ಹಿರಿತನವನ್ನು ಅನುಸರಿಸಿದೆ. ಏರ್ ಮಾರ್ಷಲ್ ಬೀರೇಂದ್ರ ಸಿಂಗ್ ಧನಾವೊ ಅವರು ಮುಂದಿನ ವಾಯುಪಡೆ ಮುಖ್ಯಸ್ಥರಾಗಿರುತ್ತಾರೆ. ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಕೂಡಾ ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News