ಆಡಳಿತ ಪಕ್ಷದ ನಿಲುವನ್ನು ವಿರೋಧಿಸಿದರೆ ರಾಷ್ಟ್ರವಿರೋಧಿ ಕೃತ್ಯವೇ? : ನಟ ಪವನ್ ಕಲ್ಯಾಣ್ ಪ್ರಶ್ನೆ
ಹೈದರಾಬಾದ್, ಡಿ.18: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ನಿಲುವನ್ನು ವಿರೋಧಿಸಿದರೆ ಅದನ್ನು ರಾಷ್ಟ್ರವಿರೋಧಿ ಕೃತ್ಯವೆನ್ನಲು ಸಾಧ್ಯವಿಲ್ಲ ಎಂದು ಖ್ಯಾತ ತೆಲುಗು ನಟ ಮತ್ತು ಜನಸೇವಾ ಪಕ್ಷದ ಮುಖಂಡ ಪವನ್ ಕಲ್ಯಾಣ್ ಹೇಳಿದ್ದಾರೆ.
ದೇಶಭಕ್ತಿ ವಿಷಯದಲ್ಲಿ ಬಿಜೆಪಿ ಪಕ್ಷದ ಧೋರಣೆಯನ್ನು ಅವರು ಕಟುವಾಗಿ ಟೀಕಿಸಿ ಟ್ವೀಟ್ ಮಾಡಿದ್ದಾರೆ. ವಿರೋಧ ಪಕ್ಷದವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಬಿಜೆಪಿಯವರು ಕೈಬಿಡಬೇಕು. ಇಲ್ಲವಾದರೆ ಜೆಎನ್‌ಯು ವಿದ್ಯಾರ್ಥಿಯ ಪ್ರಕರಣದಲ್ಲಿ ಆದಂತೆ ಇದು ಬಿಜೆಪಿಯವರಿಗೇ ತಿರುಗು ಬಾಣವಾದೀತು ಎಂದು ಪವನ್ ಹೇಳಿದರು.
ಒಂದು ಪಕ್ಷವೊಂದರ ಸಿದ್ಧಾಂತವನ್ನೇ ರಾಷ್ಟ್ರಭಕ್ತಿ ಎನ್ನಲಾಗದು ಎಂದ ಅವರು, ಸಿನೆಮಾ ಮಂದಿರಗಳಲ್ಲಿ ಸಿನೆಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಬೇಕು ಎನ್ನುವ ಆದೇಶವನ್ನು ಟೀಕಿಸಿದರು. ಜನರು ತಮ್ಮ ಕುಟುಂಬದವರು ಅಥವಾ ಸ್ನೇಹಿತರೊಂದಿಗೆ ಸಂತೋಷದಿಂದ ಕಾಲ ಕಳೆಯಲು ಥಿಯೇಟರ್‌ಗೆ ತೆರಳುತ್ತಾರೆ. ಆದರೆ ಇದನ್ನು ಅವರ ರಾಷ್ಟ್ರಭಕ್ತಿ ಪರೀಕ್ಷಾ ಕೇಂದ್ರ ಎಂದು ಪರಿಗಣಿಸಬಾರದು ಎಂದವರು ಹೇಳಿದರು.
ರಾಜಕೀಯ ಪಕ್ಷಗಳ ಸಭೆ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಯಾಕೆ ಮಾಡಬಾರದು ಎಂದು ಪ್ರಶ್ನಿಸಿದ ಅವರು, ಜನರಿಗೆ ಕಾನೂನು ಬೋಧಿಸುವವರು ಇತರರಿಗೆ ಮೇಲ್ಪಂಕ್ತಿಯಾಗಿ ನಿಲ್ಲಬೇಕು. ಕೇವಲ ಸಹಿ ಹಾಕುವ ಕೇಂದ್ರವಾಗಬಾರದು ಎಂದರು.
2014ರ ಚುನಾವಣೆ ವೇಳೆ ಜನಸೇವಾ ಪಕ್ಷವನ್ನು ಹುಟ್ಟುಹಾಕಿದ್ದ ಪವನ್, ಬಿಜೆಪಿ- ಟಿಡಿಪಿ ಮೈತ್ರಿಕೂಟದ ಪರ ಪ್ರಚಾರ ಮಾಡಿದ್ದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಮೈತ್ರಿಕೂಟವು ಚುನಾವಣೆ ಸಂದರ್ಭ ನೀಡಿದ್ದ ಭರವಸೆ ಈಡೇರಿಸಲು ವಿಫಲವಾದ ಕಾರಣ ಅದನ್ನು ಬೆಂಬಲಿಸದಿರಲು ನಿರ್ಧರಿಸಿದ್ದರು. ದನದ ಮಾಂಸ ನಿಷೇಧ ಮತ್ತು ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಕಳೆದ ಕೆಲ ದಿನಗಳಿಂದ ನಿರಂತರ ಟೀಕಾ ಪ್ರಹಾರ ಮಾಡಿದ್ದರು.