ಪ್ರಥಮ ಟೆಸ್ಟ್: ಪಾಕ್ ಹೋರಾಟಕ್ಕೆ ಶಫೀಕ್ ಶತಕದ ಬಲ
ಬ್ರಿಸ್ಬೇನ್, ಡಿ.18: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಸದ್ ಶಫೀಕ್ ಸಾಹಸದ ನೆರವಿನಿಂದ ಪಾಕಿಸ್ತಾನ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೆ ದಿನದಾಟದಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 382 ರನ್ ಗಳಿಸಿದೆ.
ಪಾಕ್‌ಗೆ ಕೊನೆಯ ದಿನವಾದ ಸೋಮವಾರ ಗೆಲ್ಲಲು ಇನ್ನೂ 108 ರನ್ ಗಳಿಸಬೇಕಾಗಿದ್ದು ಪವಾಡದ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಆಸ್ಟ್ರೇಲಿಯಕ್ಕೆ ಮೊದಲ ಪಂದ್ಯದ ಗೆಲುವಿಗೆ ಇನ್ನೆರಡು ವಿಕೆಟ್ ಅಗತ್ಯವಿದೆ.
ದಿನದಾಟದಂತ್ಯಕ್ಕೆ ಶಫೀಕ್ ಬರೋಬ್ಬರಿ ನೂರು ರನ್ ಗಳಿಸಿದ್ದಾರೆ. (ಅಜೇಯ 100, 140 ಎಸೆತ, 10 ಬೌಂಡರಿ, 1 ಸಿಕ್ಸರ್). ಯಾಸಿರ್ ಶಾ ಅಜೇಯ 4 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ 490 ರನ್ ಗುರಿ ಪಡೆದಿದ್ದ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 70 ರನ್‌ನಿಂದ 5ನೆ ದಿನವಾದ ರವಿವಾರ ಬ್ಯಾಟಿಂಗ್‌ನ್ನು ಮುಂದುವರಿಸಿತು. ದಿನಪೂರ್ತಿ ಆಡಿದ ಪಾಕ್ ಒಟ್ಟು 312 ರನ್ ಗಳಿಸಿದ್ದು, ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ದಿನದಾಟದಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 382 ರನ್ ಗಳಿಸಿರುವ ಪಾಕ್ ಗಾಬಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಾಲ್ಕನೆ ಇನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಸಾಧನೆ ಮಾಡಿದೆ.
ಆದರೆ, ಪಾಕ್‌ಗೆ ಪಂದ್ಯ ಗೆಲ್ಲುವ ಅಲ್ಪ ಅವಕಾಶವಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಅಝರ್ ಅಲಿ, ಯೂನಿಸ್ ಖಾನ್ ಹಾಗೂ ಕೆಳ ಕ್ರಮಾಂಕದಲ್ಲಿ ಮುಹಮ್ಮದ್ ಆಮಿರ್ ಮಹತ್ವದ ಕಾಣಿಕೆ ನೀಡಿದರು. 3ನೆ ವಿಕೆಟ್‌ಗೆ 91 ರನ್ ಸೇರಿಸಿದ ಅಝರ್ ಅಲಿ(72 ರನ್) ಹಾಗೂ ಯೂನಿಸ್ ಖಾನ್(65) ಆಸ್ಟ್ರೇಲಿಯಕ್ಕೆ ಮೇಲುಗೈ ನಿರಾಕರಿಸಿದರು. ಈ ಇಬ್ಬರು ಔಟಾದಾಗ ಕುಸಿತ ಕಂಡ ಪಾಕ್‌ಗೆ ಅಸದ್ ಶಫೀಕ್(ಅಜೇಯ 100) ಹಾಗೂ ಬಾಲಂಗೋಚಿ ಮುಹಮ್ಮದ್ ಆಮಿರ್(48) ಆಸರೆಯಾದರು. ಈ ಜೋಡಿ 7ನೆ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿತು.
8ನೆ ವಿಕೆಟ್‌ಗೆ ಶಫೀಕ್ ಹಾಗೂ ವಹಾಬ್ ರಿಯಾಝ್(30 ರನ್) 66 ರನ್ ಸೇರಿಸಿ ಪ್ರತಿ ಹೋರಾಟ ನೀಡಿದರು. ದಿನದಾಟದಂತ್ಯಕ್ಕೆ ರಿಯಾಝ್ ವಿಕೆಟ್ ಪಡೆದ ಆಸೀಸ್ ತಿರುಗೇಟು ನೀಡಿತು. 72 ರನ್ ಗಳಿಸಿದ್ದಾಗ ಆಸೀಸ್ ನಾಯಕ ಸ್ಟೀವನ್ ಸ್ಮಿತ್‌ರಿಂದ ಜೀವದಾನ ಪಡೆದಿದ್ದ ಶಫೀಕ್ ಒತ್ತಡದ ನಡುವೆಯೂ ಶತಕ ಬಾರಿಸಿ ಗಮನಸೆಳೆದರು.
ಆಸ್ಟ್ರೇಲಿಯದ ಪರವಾಗಿ ವೇಗಿಗಳಾದ ಸ್ಟಾರ್ಕ್(3-97)ಹಾಗೂ ಬರ್ಡ್(3-94) ತಲಾ ಮೂರು ವಿಕೆಟ್ ಪಡೆದರು. ಲಿಯೊನ್(2-100) ಎರಡು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್:
130.1 ಓವರ್‌ಗಳಲ್ಲಿ 429
ಪಾಕಿಸ್ತಾನ ಪ್ರಥಮ ಇನಿಂಗ್ಸ್:
55 ಓವರ್‌ಗಳಲ್ಲಿ 142
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್: 39 ಓವರ್‌ಗಳಲ್ಲಿ 202/5 ಡಿಕ್ಲೇರ್
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 123 ಓವರ್‌ಗಳಲ್ಲಿ 382/8
(ಶಫೀಕ್ ಅಜೇಯ 100, ಅಝರ್ ಅಲಿ 71, ಯೂನಿಸ್ ಖಾನ್ 65, ಆಮಿರ್ 48, ರಿಯಾಝ್ 30,ಸ್ಟಾರ್ಕ್ 3-97, ಬರ್ಡ್ 3-94, ಲಿಯೊನ್ 2-100)