ದ.ಕ.ಜಿಲ್ಲೆಗಿಲ್ಲ ‘ಹೊಸ ತಾಲೂಕು, ಹೋಬಳಿ ರಚನೆ’ ಭಾಗ್ಯ

Update: 2016-12-18 18:34 GMT

ಮಂಗಳೂರು, ಡಿ.18: ದ.ಕ. ಜಿಲ್ಲೆಯಲ್ಲಿ ಹೊಸ ತಾಲೂಕು ಮತ್ತು ಹೋಬಳಿಗಳ ರಚನೆ ಭಾಗ್ಯ ಸದ್ಯಕ್ಕೆ ದಕ್ಕುವ ಸಾಧ್ಯತೆ ಇಲ್ಲ. ಕಳೆದ ಅವಧಿಯಲ್ಲಿ ಬಿಜೆಪಿ ಸರಕಾರ ಹೊಸ ತಾಲೂಕುಗಳ ಘೋಷಣೆ ಮಾಡಿದ್ದರೆ, ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಅದನ್ನು ಜಾರಿಗೊಳಿಸುವ ಬಗ್ಗೆ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಜೊತೆಗೆ ದ.ಕ. ಜಿಲ್ಲೆಯಲ್ಲಿ ಹೊಸ 20 ಹೋಬಳಿ ರಚನೆಯ ಕುರಿತು ಭರವಸೆಗಳನ್ನು ನೀಡುತ್ತಾ ಬಂದಿವೆ. ಆದರೆ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಂದಾಗಲಿ, ಅಧಿಕಾರಿಗಳಿಂದಾಗಲಿ ಕರಾರುವಕ್ಕಾಗಿ ಪ್ರಯತ್ನಗಳಾಗಿಲ್ಲ.

ದ.ಕ. ಜಿಲ್ಲೆಯಲ್ಲಿ ಸದ್ಯ 5 ತಾಲೂಕುಗಳಿವೆ. ಮುಲ್ಕಿ, ಕಡಬ, ಮೂಡುಬಿದಿರೆ ಹೀಗೆ ಹೊಸ ತಾಲೂಕುಗಳನ್ನು ರಚಿಸಬೇಕು ಎಂಬ ಬೇಡಿಕೆಯು ಕಳೆದ 55 ವರ್ಷಗಳಿಂದ ಕೇಳಿ ಬಂದಿದೆ. ಅಂದರೆ 1961ರಲ್ಲಿ ಕಡಬ ಮತ್ತು 1964ರಲ್ಲಿ ಮೂಡುಬಿದಿರೆ ತಾಲೂಕು ರಚನೆಯಾಗಬೇಕು ಎಂದು ಬೇಡಿಕೆಯನ್ನಿಟ್ಟು ಭಾರೀ ಹೋರಾಟ ನಡೆಸಲಾಗಿತ್ತು. ಆ ಬಳಿಕ ಸಮಿತಿಗಳನ್ನು ರಚಿಸಿ ಹೋರಾಟ ತೀವ್ರಗೊಳಿಸಲಾಗಿತ್ತು. ಇದಕ್ಕೆ ಆ ಭಾಗದ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದರು.

ಇದು ಸಾರ್ವಜನಿಕರ ಬೇಡಿಕೆಯಾದರೆ, ಇದಕ್ಕೆ ಸಂಬಂಧಿಸಿ ರಚಿಸಲಾದ ಸಮಿತಿಗಳು ಕೂಡ ರಚನೆಯ ಬಗ್ಗೆ ಶಿಫಾರಸು ಮಾಡಿ ಸುಮಾರು 31 ವರ್ಷ ಸಂದಿವೆ. ಅಂದರೆ, 1985ರಲ್ಲಿ ಬಿ.ಎಂ.ಹುಂಡೇಕರ್ ಸಮಿತಿಯು ಕಡಬ ಮತ್ತು ಮೂಡುಬಿದಿರೆ ತಾಲೂಕು ರಚನೆಯ ಬಗ್ಗೆ ಶಿಫಾರಸು ಮಾಡಿತ್ತು. ಆ ಬಳಿಕ ರಚನೆಗೊಂಡ ಗದ್ದಿಗೌಡರ್ ಮತ್ತು ವಾಸುದೇವರಾವ್ ಸಮಿತಿ ಕೂಡ ಈ ಬಗ್ಗೆ ಶಿಫಾರಸು ಮಾಡಿತ್ತು. ಅಂತೂ ಕಡಬ ಮತ್ತು ಮೂಡುಬಿದಿರೆಗೆ ವಿಶೇಷ ತಹಶೀಲ್ದಾರರ ನೇಮಕ ಮಾಡಲಾಯಿತು. 2013ರಲ್ಲಿ ಬಿಜೆಪಿ ಸರಕಾರದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ 43 ಹೊಸ ತಾಲೂಕುಗಳನ್ನು ರಚಿಸುವ ಬಗ್ಗೆ ಘೋಷಣೆ ಮಾಡಿ ದರು. ಅದರಲ್ಲಿ ಕಡಬ ಮತ್ತು ಮೂಡುಬಿದಿರೆ ಸೇರಿತ್ತು. ಆದರೆ, ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷವಾದರೂ ಹೊಸ ತಾಲೂಕು ಅಸ್ತಿತ್ವಕ್ಕೆ ಬಂದಿಲ್ಲ. ಈ ಮಧ್ಯೆ ಮಂಗಳೂರು ತಾಲೂಕಿನಲ್ಲೇ ಮಂಗಳೂರು ನಗರ ಮತ್ತು ಮಂಗಳೂರು ಗ್ರಾಮಾಂತರ ಅಥವಾ ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಎಂಬ ಇನ್ನೂ ಹೊಸ ಎರಡು ತಾಲೂಕುಗಳ ಬೇಡಿಕೆ ಕೇಳಿ ಬರುತ್ತಿವೆ. ಜನಸಂಖ್ಯೆಯ ಹೆಚ್ಚಳ ಮತ್ತು ಭೌಗೋಳಿಕ ವಿಸ್ತೀರ್ಣವನ್ನು ಪರಿಗಣಿಸಿದಾಗ ಇದು ಅನಿವಾರ್ಯ ಕೂಡ. ಆದರೆ, ಆಗಲೇ ಘೋಷಿಸಲ್ಪಟ್ಟ ತಾಲೂಕುಗಳ ರಚನೆಯಾಗದ ಹೊರತು ಹೊಸ ತಾಲೂಕುಗಳ ಬೇಡಿಕೆಗೆ ಬೆಂಬಲ ಸಿಗುವ ಸಾಧ್ಯತೆ ಕ್ಷೀಣ.

*ಕಡತದಲ್ಲೇ ಬಾಕಿಯಾದ ಹೊಸ ಹೋಬಳಿಗಳು: ಮಂಗಳೂರಿನಲ್ಲಿ ಸದ್ಯ 17 ಹೋಬಳಿಗಳಿವೆ. ಕಳೆದ ವರ್ಷದ ಆರಂಭದಲ್ಲೇ ಇನ್ನೂ ಹೊಸ 20 ಹೋಬಳಿಗಳನ್ನು ರಚಿಸುವ ಪ್ರಸ್ತಾವನೆ ಇತ್ತು. ಅಂದರೆ ದ.ಕ. ಜಿಲ್ಲೆಯಲ್ಲಿ ಒಟ್ಟು 37 ಹೋಬಳಿಗಳನ್ನು ಅಸ್ತಿತ್ವಕ್ಕೆ ತರಲು ಜಿಲ್ಲಾಡಳಿತ ಬಯಸಿತ್ತು.

ಮಂಗಳೂರು ತಾಲೂಕಿನಲ್ಲಿ ಮಂಗಳೂರು ‘ಎ’, ಲೇಡಿಹಿಲ್, ಅಳಪೆ, ತೊಕ್ಕೊಟ್ಟು,ದೇರಳಕಟ್ಟೆ, ಗುರುಪುರ, ವಾಮಂಜೂರು, ಸುರತ್ಕಲ್, ಕಾವೂರು, ಬಜ್ಪೆ, ಮುಲ್ಕಿ, ಕಿನ್ನಿಗೋಳಿ, ಮೂಡುಬಿದಿರೆ ಉತ್ತರ, ಮೂಡುಬಿದಿರೆ ದಕ್ಷಿಣ, ಶಿರ್ತಾಡಿ. ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ, ಕಾವಳಮುಡೂರು, ಬಿ.ಮೂಡ, ಮುಡಿಪು, ವಿಟ್ಲ, ಮಾಣಿ. ಬೆಳ್ತಂಗಡಿ ತಾಲೂಕಿನಲ್ಲಿ ಬೆಳ್ತಂಗಡಿ, ಉಜಿರೆ, ಕೊಕ್ಕಡ, ತಣ್ಣೀರುಪಂತ, ವೇಣೂರು, ಅಳದಂಗಡಿ, ಪುತ್ತೂರು ತಾಲೂಕಿನಲ್ಲಿ ಪುತ್ತೂರು, ಕಾವು, ಉಪ್ಪಿನಂಗಡಿ, ನೆಲ್ಯಾಡಿ, ಕಡಬ, ಸವಣೂರು. ಸುಳ್ಯ ತಾಲೂಕಿನಲ್ಲಿ ಸುಳ್ಯ, ಬೆಳ್ಳಾರೆ, ಪಂಜ, ಸುಬ್ರಹ್ಮಣ್ಯ.

ಪ್ರತಿಯೊಂದು ಹೋಬಳಿಗೊಬ್ಬ ಕಂದಾಯ ನಿರೀಕ್ಷಕರನ್ನು ನೇಮಿಸಿದರೆ ಕಂದಾಯ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇಮಾಡುವ ಅವಕಾಶವಿದೆ. ಇದರಿಂದ ಗ್ರಾಮಾಂತರ ಪ್ರದೇಶದ ಜನರು ನಗರದಲ್ಲಿರುವ ಕಂದಾಯ ನಿರೀಕ್ಷಕರ ಕಚೇರಿಗಾಗಿ ಅಲೆದಾಡುವುದು ತಪ್ಪಲಿದೆ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಸೂಚನೆ ಮೇರೆಗೆ ನಿಕಟಪೂರ್ವ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೋಬಳಿಗೆ ಸಂಬಂಧಿಸಿ ಸರ್ವೇ ನಡೆಸಿ ಪ್ರಸ್ತಾವ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿದ್ದರೂ ಬಳಿಕ ಆದ ಬೆಳವಣಿಗೆ ಶೂನ್ಯ.

ಒಟ್ಟಿನಲ್ಲಿ ಜನಪ್ರತಿನಿಧಿಗಳ, ಹಿರಿಯ ಅಧಿಕಾರಿಗಳ ನಿರ್ಲಕ್ಷದಿಂದ ದ.ಕ.ಜಿಲ್ಲೆಗೆ ‘ಹೊಸ ತಾಲೂಕು-ಹೋಬಳಿ ರಚನೆ’ಯ ಭಾಗ್ಯ ಸದ್ಯ ಸಿಗುವ ಸಾಧ್ಯತೆ ಕಡಿಮೆ.

****ದ.ಕ.ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜನಸಂಖ್ಯೆಯೂ ಹೆಚ್ಚುತ್ತಿವೆ. ಅದಕ್ಕೆ ತಕ್ಕಂತೆ ಅನುಕೂಲಕರ ವಾತಾವರಣ ಸೃಷ್ಟಿಸುವ ಹೊಣೆ ಜನಪ್ರತಿನಿಧಿಗಳದ್ದಾಗಿವೆ. ಸಾಕಷ್ಟು ಭರವಸೆಯೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಒಳಜಗಳದಿಂದ ಮೂರು ಮುಖ್ಯಮಂತ್ರಿಗಳನ್ನು ಸೃಷ್ಟಿಸುತ್ತೇ ವಿನಃ ಹೇಳಿಕೊಳ್ಳುವಂತಹ ಆಡಳಿತ ನೀಡಿಲ್ಲ. ಆ ಬಳಿಕ ಬಂದ ಕಾಂಗ್ರೆಸ್ ಸರಕಾರ ಕೂಡ ಹೇಳಿಕೆಯಲ್ಲೇ ಕಾಲ ಕಳೆಯುತ್ತಿವೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದ ಪೈಕಿ 7ರಲ್ಲಿ ಕಾಂಗ್ರೆಸ್ ಜಯಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಸಂಪುಟದಲ್ಲಿ ಅವಿಭಜಿತ ದ.ಕ. ಜಿಲ್ಲೆಯ 4 ಮಂದಿಗೆ ಸಚಿವ ಸ್ಥಾನ ಕಲ್ಪಿಸಿದ್ದರು. ಆವಾಗ ಈ ಎಲ್ಲ ಸಚಿವರು ಭಾರೀ ನಿರೀಕ್ಷೆಯನ್ನೇ ಹುಟ್ಟು ಹಾಕಿದ್ದರು. ಆದರೆ, ಅಧಿಕಾರಕ್ಕೇರಿ ಮೂರು ವರ್ಷ ಕಳೆದರೂ ನಿರೀಕ್ಷೆ ಹುಸಿಯಾಗಿದೆ. ಹೊಸ ತಾಲೂಕು ಮತ್ತು ಹೋಬಳಿಗಳ ರಚನೆ ಸಹಿತ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಎಲ್ಲ ಅವಕಾಶಗಳನ್ನು ಇವರು ಕಳಕೊಳ್ಳುತ್ತಿರುವುದು ವಿಪರ್ಯಾಸ.

-ಮನೋಹರ, ಸಾಮಾಜಿಕ ಕಾರ್ಯಕರ್ತರು ಮಂಗಳೂರು

Writer - -ಹಂಝ ಮಲಾರ್

contributor

Editor - -ಹಂಝ ಮಲಾರ್

contributor

Similar News