ನೋಟು ರದ್ದತಿ ಟೀಕಿಸಿದ ವ್ಯಕ್ತಿಗೆ ಹಲ್ಲೆ, ಹಣ ಲೂಟಿ
ಹೊಸದಿಲ್ಲಿ, ಡಿ.19: ಕೇಂದ್ರ ಸರಕಾರದ ನೋಟು ರದ್ದತಿ ನಿರ್ಧಾರವನ್ನು ಟೀಕಿಸಿದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಆಗ್ನೇಯ ದಿಲ್ಲಿಯ ಜೈತಪುರ ಪ್ರದೇಶದಲ್ಲಿ ನಡೆದಿದೆ. ಡಿಸೆಂಬರ್ 15ರಂದು ನಡೆದ ಹಲ್ಲೆಯಿಂದ ಲಲ್ಲನ್‌ಸಿಂಗ್ ಖುಷ್ವಾಹ ಅವರ ತಲೆಗೆ ಗಂಭೀರ ಗಾಯಗಳಾಗಿವೆ.
ಟೆಲಿವಿಷನ್ ಖರೀದಿಸಲು ಹೋಗುತ್ತಿದ್ದಾಗ, ಕೇಂದ್ರದ ನಿರ್ಧಾರ ವಿರುದ್ಧ ಇವರು ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಆರೋಪಿ ಅಶೀಕ್‌ನನ್ನು ಬಂಧಿಸಲಾಗಿದೆ.
ಖುಷ್ವಾಹ ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಮಕ್ಕಳ ಕೋರಿಕೆ ಮೇರೆಗೆ ಟೆಲಿವಿಷನ್ ಖರೀದಿಸಲು ಬಯಸಿದ್ದರು. "ನಾನು ಎಟಿಎಂ ಸರದಿಯಲ್ಲಿ ನಿಂತಿರಲಿಲ್ಲ. ಆದರೆ ಸರದಿಯನ್ನು ನೋಡಿದಾಗ, ಬಡವರು ಮಾತ್ರ ತೊಂದರೆ ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಇದರಿಂದಾಗಿ ನೋಟು ರದ್ದತಿ ನಿರ್ಧಾರವನ್ನು ನಾನು ಟೀಕಿಸಿದೆ. ತಕ್ಷಣ ಅಂಗಡಿಯಲ್ಲಿ ಒಬ್ಬ ನನ್ನನ್ನು ನಿಂದಿಸಲು ತೊಡಗಿದ. ಅದಕ್ಕೆ ಕಾರಣ ಕೇಳಿದಾಗ, ನನ್ನ ಮೇಲೆ ಹಲ್ಲೆ ನಡೆಸಿ, ಪ್ರಧಾನಿಯನ್ನು ನೀನು ಹೇಗೆ ಟೀಕಿಸಿದೆ ಎಂದು ಪ್ರಶ್ನಿಸಿದ. ತಕ್ಷಣ ಇತರರೂ ಆತನ ಜತೆಗೆ ಸೇರಿಕೊಂಡರು. ನನ್ನ ತಲೆಗೆ ಗಾಯವಾಗಿ ರಕ್ತ ಸುರಿಯಲಾರಂಭಿಸಿತು" ಎಂದು ಘಟನೆಯನ್ನು ವಿವರಿಸಿದರು.
ಕೆಲವರು ಮಧ್ಯಪ್ರವೇಶಿಸಿದ್ದರಿಂದಾಗಿ ತಾನು ಪಾರಾಗುವುದು ಸಾಧ್ಯವಾಯಿತು ಎಂದು ಖುಷ್ವಾಹ ಹೇಳಿಕೊಂಡಿದ್ದಾರೆ. "ತಕ್ಷಣ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ನನ್ನ ತಲೆಗೆ ಹೊಲಿಗೆ ಹಾಕಿದರು. ನಾನು ಯಾವ ತಪ್ಪೂ ಮಾಡಿಲ್ಲ ಎಂಬ ಭಾವನೆ ನನ್ನಲ್ಲಿ ಈಗಲೂ ಇದೆ. ಹಲ್ಲೆ ಮಾಡಿದ ವ್ಯಕ್ತಿಗಳು ನನ್ನಿಂದ 6000 ರೂಪಾಯಿ ಕಿತ್ತುಕೊಂಡಿದ್ದಾರೆ. ನನ್ನ ಚಿಕಿತ್ಸೆಗಾಗಿ ನಾನು ಸಾಲ ಪಡೆಯಬೇಕಾಯಿತು. ಹಲವು ದಿನ ಕೂಲಿ ಕೆಲಸ ಮಾಡಲು ಸಾಧ್ಯವಾಗದೇ ನನ್ನ ಕೂಲಿ ಕೂಡಾ ನಷ್ಟವಾಗಿದೆ. ಕುಟುಂಬ ನಿರ್ವಹಣೆ ಹೇಗೆ ಎನ್ನುವುದೇ ನನ್ನ ಚಿಂತೆ" ಎಂದು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 323 ಹಾಗೂ 341ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.