×
Ad

ತಮಿಳುನಾಡು ಮುಖ್ಯಮಂತ್ರಿ ಗಾದಿಯತ್ತ ಶಶಿಕಲಾ?

Update: 2016-12-19 09:12 IST

ಚೆನ್ನೈ, ಡಿ.19: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ತಕ್ಷಣ ತಮಿಳುನಾಡಿನ ಮುಖ್ಯಮಂತ್ರಿ ಗಾದಿ ಅಲಂಕರಿಸಬೇಕು ಎಂದು ಎಐಎಡಿಎಂಕೆಯ ಹಲವು ಮಂದಿ ಹಿರಿಯ ಮುಖಂಡರು ಒತ್ತಾಯಿಸಿದ್ದಾರೆ. ಪಕ್ಷದ ಪರಮೋಚ್ಛ ಹುದ್ದೆಯನ್ನೂ ಸ್ವೀಕರಿಸುವಂತೆ ಆಗ್ರಹಿಸಿದ್ದಾರೆ.

ಜಯಲಲಿತಾ ನಿಧನದ ಬಳಿಕ ಮುಖ್ಯಮಂತ್ರಿ ಓ.ಪನ್ನೀರ್‌ಸೆಲ್ವಂ, ಲೋಕಸಭೆಯ ಉಪಸ್ಪೀಕರ್ ಎಂ.ತಂಬಿದೊರೈ ಸೇರಿದಂತೆ ಹಲವು ಮಂದಿ, ಜಯಲಲಿತಾ ಹೊಂದಿದ್ದ ಹುದ್ದೆಯನ್ನು ಅಲಂಕರಿಸುವಂತೆ ಶಶಿಕಲಾ ಅವರಿಗೆ ಮನವಿ ಮಾಡಿಕೊಂಡಿದ್ದರು.

ಆಡಳಿತಾರೂಢ ಪಕ್ಷದ ಘಟಕವಾದ ಜಯಲಲಿತಾ ಪೆರವಾಯಿ, ಈ ಕುರಿತು ನಿರ್ಣಯ ಆಂಗೀಕರಿಸಿದ್ದು, ಶಶಿಕಲಾ ಅವರೇ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಹಾಗೂ ಮುಖ್ಯಮಂತ್ರಿ ಹುದ್ದೆ ನಿಭಾಯಿಸಬೇಕು ಎಂದು ಆಗ್ರಹಿಸಿದೆ. ಈ ಹಿಂದೆ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಚೆನ್ನೈನ ಆರ್.ಕೆ.ನಗರ ಕ್ಷೇತ್ರದಿಂದಲೇ ಸ್ಪರ್ಧೆಗೆ ಇಳಿಯಬೇಕು ಎಂದು ಘಟಕ ಆಗ್ರಹಿಸಿದೆ.

ರಾಜ್ಯದ ಕಂದಾಯ ಸಚಿವರೂ ಆಗಿರುವ ಪೆರವಾಯಿ ಕಾರ್ಯದರ್ಶಿ ಆರ್.ಬಿ.ಉದಯಕುಮಾರ್ ಅವರು, "ಶಶಿಕಲಾ, ಅಮ್ಮಾ ನೀಡಿದ ವರ" ಎಂಬ ನಿರ್ಣಯವನ್ನು ಶಶಿಕಲಾ ಅವರಿಗೆ ಸಲ್ಲಿಸಿ, ಎರಡೂ ಹುದ್ದೆಗಳನ್ನು ನಿಭಾಯಿಸುವಂತೆ ಮನವಿ ಮಾಡಿದರು.

"ಎಐಎಡಿಎಂಕೆಯನ್ನು ರಕ್ಷಿಸುವ ಜತೆಗೆ, ಚಿನ್ನಮ್ಮ ಆರ್.ಕೆ.ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಬೇಕು. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಬೇಕು ಹಾಗೂ ಅಮ್ಮನ ಸರಕಾರದ ನೇತೃತ್ವ ವಹಿಸಬೇಕು" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News