ಅಮಾನತ್ತಾದ ಮಹಿಳಾ ಐಎಎಸ್ ಅಧಿಕಾರಿಯಿಂದ ಪ್ರಧಾನಿಗೆ ದೂರು
ಭೋಪಾಲ್, ಡಿ.19: ಅಮಾನತುಗೊಂಡ ಮಧ್ಯಪ್ರದೇಶದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದಲಿತ ವಿರೋಧಿ ಹಾಗು ಅವರ ನೆಚ್ಚಿನ ಅಧಿಕಾರಿಗಳ ಬಳಿ ಬಿಲಿಯಗಟ್ಟಲೆ ರೂ. ಗಳ ಬೇನಾಮಿ ಆಸ್ತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಪ್ಪು ಹಣ ಹಾಗು ಬೇನಾಮಿ ಆಸ್ತಿ ವಿರುದ್ಧ ಮೋದಿಯವರ ಅಭಿಯಾನವನ್ನು ಬೆಂಬಲಿಸಿರುವ ದಲಿತ ಐಎಎಸ್ ಅಧಿಕಾರಿ ಶಶಿ ಕರ್ಣಾವತ್ ಅವರು " ಮುಖ್ಯಮಂತ್ರಿ ಶಿವರಾಜ್ ಅವರಿಗೆ ಆಪ್ತರಾಗಿರುವ ಅಧಿಕಾರಿಗಳು ಹಲವು ಬೇನಾಮಿ ಆಸ್ತಿಗಳನ್ನು ಮಾಡಿಟ್ಟಿದ್ದಾರೆ ಹಾಗೂ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ " ಎಂದು ಆರೋಪಿಸಿದ್ದಾರೆ.
ಇಂತಹ ಅಧಿಕಾರಿಗಳನ್ನು ಮುಖ್ಯಮಂತ್ರಿ ರಕ್ಷಿಸುತ್ತಿದ್ದು, ದಲಿತ ಅಧಿಕಾರಿಗಳಿಗೆ ಮಾತ್ರ ಕಿರುಕುಳ ನೀಡಲಾಗುತ್ತಿದೆ. ಇನ್ನೊಬ್ಬ ದಲಿತ ಐಎಎಸ್ ಅಧಿಕಾರಿ ರಮೇಶ್ ಥೇಟೆ ವಿರುದ್ಧ ಅವರನ್ನು ಪ್ರಧಾನ ಕಾರ್ಯದರ್ಶಿ ಆರ್.ಎಸ್.ಜೂಲಾನಿಯ ಅವರು ತಾರತಮ್ಯ ನೀತಿ ಅನುಸರಿಸಿ, ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಕರ್ಣಾವತ್ ಹೇಳಿದ್ದಾರೆ.
"ಮುಖ್ಯಮಂತ್ರಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅದಕ್ಕಾಗಿ ಸಾಕ್ಷ್ಯ ನೀಡಲು ಅವರ ಆಪ್ತ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಇದನ್ನು ನಾನು ಪ್ರತಿಭಟಿಸಿದಾಗ ನನಗೆ ನ್ಯಾಯ ನೀಡುತ್ತೇವೆ ಎಂದು ಹೇಳಿ ಹುದ್ದೆಯಿಂದಲೇ ಅಮಾನತು ಮಾಡಿದರು" ಎಂದು ಕರ್ಣಾವತ್ ಹೇಳಿದ್ದಾರೆ.
ಚೌಹಾಣ್ ಅವರನ್ನು ದಲಿತ ವಿರೋಧಿ ಎಂದು ಆರೋಪಿಸಿರುವ ಕರ್ಣಾವತ್ ಅವರು ಇದರಿಂದ ರಾಜ್ಯದಲ್ಲಿ ಬಿಜೆಪಿ ದಲಿತ ವಿರೋಧಿ ಎಂಬ ಭಾವನೆ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿಗಳ ಮೇಲೆ ಸಿಬಿಐ ದಾಳಿ ಮಾಡಿಸಿ ಅವರ ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು ಎಂದೂ ಕರ್ಣಾವತ್ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.