×
Ad

ಸುರಕ್ಷಿತ ವಿಮಾನ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣದಲ್ಲೇ ಆಡಿನ ಬಲಿ ನೀಡಿದ ಏರ್ ಲೈನ್ಸ್ !

Update: 2016-12-19 17:57 IST

ಇಸ್ಲಾಮಾಬಾದ್,ಡಿ.19: ಇತ್ತೀಚಿನ ಭೀಕರ ವಿಮಾನ ಅಪಘಾತದ ಬಳಿಕ ಸರಕಾರಿ ಸ್ವಾಮ್ಯದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್(ಪಿಐಎ) ತನ್ನ ವಿಮಾನ ಯಾನಗಳ ಸುರಕ್ಷತೆಯನ್ನು ಬಯಸಿ ರವಿವಾರ ಇಲ್ಲಿಯ ಬೆನಝೀರ್ ಭುಟ್ಟೋ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಎಟಿಆರ್-42 ವಿಮಾನದ ಯಾನಕ್ಕೆ ಮುನ್ನ ‘ಸದಖ’ ರೂಪದಲ್ಲಿ ಕಪ್ಪು ಆಡೊಂದನ್ನು ಬಲಿ ನೀಡಿದೆ.

ಬಳಿಕ ವಿಮಾನವು ಮುಲ್ತಾನ್‌ಗೆ ಪ್ರಯಾಣ ಬೆಳೆಸಿದ್ದು, ಇದು ಡಿ.7ರಂದು ಹವೇಲಿಯಾಂ ಬಳಿ ವಿಮಾನ ಪತನದ ಹಿನ್ನೆಲೆಯಲ್ಲಿ ಇಂತಹ ಎಲ್ಲ ವಿಮಾನಗಳ ಸಂಪೂರ್ಣ ತಪಾಸಣೆಯ ಬಳಿಕ ಸೇವೆಯಲ್ಲಿ ತೊಡಗಿಕೊಂಡ ಮೊದಲ ವಿಮಾನವಾಗಿದೆ ಎಂದು ಡಾನ್ ಡಾಟ್ ಕಾಮ್ ವರದಿ ಮಾಡಿದೆ.

ಎಲ್ಲ ಎಟಿಆರ್-42 ವಿಮಾನಗಳ ಸಂಪೂರ್ಣ ತಪಾಸಣೆಯ ಬಳಿಕ ಹಾರಾಟಕ್ಕೆ ಯೋಗ್ಯವಾಗಿವೆ ಎಂದು ಶಿಫಾರಸು ದೊರೆಯುವವರೆಗೆ ಅವುಗಳ ಹಾರಾಟವನ್ನು ಸ್ಥಗಿತಗೊಳಿಸಲು ನಾಗರಿಕ ವಾಯುಯಾನ ಪ್ರಾಧಿಕಾರವು ನಿರ್ಧರಿಸಿತ್ತು. ಇದರಿಂದಾಗಿ ಪಿಐಎ ಕಾರ್ಯಾಚರಣೆಗೆ ವ್ಯತ್ಯಯವುಂಟಾಗಿತ್ತು.

ರವಿವಾರ ಸಂಜೆ 6:40ಕ್ಕೆ ಇಸ್ಲಾಮಾಬಾದ್ ನಿಲ್ದಾಣದಿಂದ ಮುಲ್ತಾನ್‌ಗೆ ಹಾರಾಟ ವನ್ನು ಆರಂಭಿಸಿದ್ದ ವಿಮಾನವು ರಾತ್ರಿ 9:45ಕ್ಕೆ ವಾಪಸಾಗಿತ್ತು.

ಆದರೆ ಕಪ್ಪುಆಡಿನ ಬಲಿ ಟ್ವಿಟರಿಗರ ಮೇಲೆ ಅಂತಹ ಪರಿಣಾಮವನ್ನೇನೂ ಬೀರಿಲ್ಲ. ಪಿಐಎ ತನ್ನ ವಿಮಾನಗಳ ಸುಸ್ಥಿತಿ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News