ವಾರ್ತಾಭಾರತಿ ವಿರುದ್ಧ ಮಂಗಳಾ ನರ್ಸಿಂಗ್ ಹೋಂ ದಾಖಲಿಸಿದ್ದ ದೂರು ವಜಾ

Update: 2016-12-19 18:33 GMT

ಮಂಗಳೂರು, ಡಿ.19: ವಾರ್ತಾಭಾರತಿ ಪತ್ರಿಕೆಯ ವಿರುದ್ಧ ದ.ಕ. ಜಿಲ್ಲಾ ಮೂರನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದಾಖಲಿಸಿದ್ದ ಖಾಸಗಿ ದಾವೆಯನ್ನು ನ್ಯಾಯಾಲಯ ವಜಾಗೊಳಿಸಿ ತೀರ್ಪುನೀಡಿದೆ.
   *ಪ್ರಕರಣದ ವಿವರ: ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಸತ್ಯನಾರಾಯಣರಾವ್ ಅವರ ಹೇಳಿಕೆಯ ಪ್ರಕಾರ, ಅವರು 2007 ನ.30ರಂದು ಸಂಜೆ ಸ್ಕೂಟರ್ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಅವರಿಗೆ ನಗರದ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ನಲ್ಲಿ ಅನಗತ್ಯ ಔಷಧ ನೀಡಿ ಬಲವಂತದಿಂದ ದುಬಾರಿ ವೆಚ್ಚವನ್ನು ವಸೂಲಿ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ನ ಡಾ. ಗಣಪತಿ ಮತ್ತು ಶಂಕರ್ ವಿರುದ್ಧ ದೂರು ನೀಡಿದ್ದರು.
     ದೂರಿನಲ್ಲಿ ಸತ್ಯನಾರಾಯಣರಾವ್‌ರ ಹೇಳಿಕೆಯ ಪ್ರಕಾರ, ತಾನು ಸ್ಕೂಟರ್‌ನಿಂದ ಬಿದ್ದು ಅಪಘಾತವಾದ ಸಂದರ್ಭದಲ್ಲಿ ಹತ್ತಿರದ ಬೆನಕಾ ಹೆಲ್ತ್ ಸೆಂಟರ್‌ಗೆ ಪ್ರಥಮ ಚಿಕಿತ್ಸೆಗೆ ತನ್ನನ್ನು ಕರೆದುಕೊಂಡು ಹೋದರು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆಗ ನಾನು ಎ.ಜೆ.ಆಸ್ಪತ್ರೆಗೆ ದಾಖಲಿಸುವಂತೆ ಕೇಳಿ ಕೊಂಡೆ. ಆದರೆ ಆ್ಯಂಬುಲೆನ್ಸ್ ಚಾಲಕ ನನ್ನ ಹಾಗೂ ನನ್ನ ಜೊತೆ ಇದ್ದ ನನ್ನ ತಮ್ಮ ಮನ್ಮಥ ರಾವ್ ಹಾಗೂ ಆತನ ಪತ್ನಿಯ ಮಾತಿಗೆ ವಿರುದ್ಧವಾಗಿ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ಗೆ ಸೇರಿಸಿದ್ದಾರೆ.
 ಆ ಸಂದರ್ಭದಲ್ಲಿ ಮಂಗಳಾ ನರ್ಸಿಂಗ್ ಹೋಂನಲ್ಲಿ ಅನಗತ್ಯ ಔಷಧ ನೀಡಿ ತಾನು ಪ್ರಜ್ಞಾ ಹೀನ ಸ್ಥಿತಿಗೆ ತಲುಪಿದ್ದೆ. ನನ್ನ ಕುಟುಂಬದ ಸದಸ್ಯರೊಂದಿಗೂ ಮಾತನಾಡಲು ಅವಕಾಶ ನೀಡಲಿಲ್ಲ.ಬಳಿಕ ತಜ್ಞ ಡಾ.ಸುಬ್ರಹ್ಮಣ್ಯರ ಸಲಹೆಯ ಮೇರೆಗೆ ನಾವು ಆ ಆಸ್ಪತ್ರೆಯಿಂದ ಬೇರೆ ಕಡೆ ಚಿಕಿತ್ಸೆ ಪಡೆಯಲು ನಿರ್ಧರಿಸಿದೆವು. ಆದರೆ ಆಗ ನನ್ನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬೇಕಾದರೆ 1.50 ಲಕ್ಷ ರೂ. ಆಸ್ಪತ್ರೆಯ ಒಟ್ಟು ವೆಚ್ಚ ಪಾವತಿಸುವಂತೆ ಸೂಚನೆ ನೀಡಿದರು. ಪಾವತಿಸದಿದ್ದರೆ ಡಿಸ್ಚಾರ್ಜ್ ಮಾಡುವುದಿಲ್ಲ ಎಂದು ತಿಳಿಸಿದರು.
 
      
ಬಳಿಕ 1.50 ಲಕ್ಷ ರೂ. ಪಾವತಿಸಿ ಅಲ್ಲಿಂದ ನನ್ನನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೆಲವೇ ದಿನಗಳ ಚಿಕಿತ್ಸೆಯಲ್ಲಿ ನಾನು ಗುಣಮುಖನಾದೆ. ಈ ಸಂದರ್ಭದಲ್ಲಿ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ನಲ್ಲಿ ನನಗೆ ಅನಗತ್ಯ ಔಷಧ ನೀಡಲಾಗಿದೆ ಎನ್ನುವುದನ್ನು ತಜ್ಞ ವೈದ್ಯರು ದೃಢಪಡಿಸಿದ್ದಾರೆ. ಈ ಎಲ್ಲ ಘಟನೆಗಳಿಂದ ನನಗೆ ಮಾನಸಿಕ ಕಿರುಕುಳವಾಗಿದೆ ಎಂದು ಸತ್ಯನಾರಾಯಣರಾವ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ನ ಮಾಲಕ ಡಾ.ಗಣಪತಿ ಹಾಗೂ ಶಂಕರ್ ವಿರುದ್ಧ ದೂರು ನೀಡಿರುವುದಾಗಿ ಮತ್ತು ತನಗೆ ಸದ್ರಿ ಸಂಸ್ಥೆಯಿಂದ ಅನ್ಯಾಯವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಸತ್ಯನಾರಾಯಣ ರಾವ್ ನೀಡಿದ ದೂರಿನ ಪ್ರತಿ, ತಜ್ಞ ವೈದ್ಯರ ವರದಿ, ಇತರ ದಾಖಲೆಗಳನ್ನು ಹಾಗೂ ಅವರಿಗೆ ಚಿಕಿತ್ಸೆ ನೀಡಿದ ವಿವರಗಳನ್ನು ಪಡೆದುಕೊಂಡು ಪತ್ರಿಕೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜನವರಿ, 2008ರಲ್ಲಿ ವರದಿಗಳನ್ನು ಪ್ರಕಟಿಸಿದ್ದವು. ಅಲ್ಲದೆ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್ ವಿರುದ್ಧ ಸತ್ಯನಾರಾಯಣ ರಾವ್ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಇಲ್ಲಿ ಪ್ರಕರಣದ ವಿಚಾರಣೆಯ ಹಂತದಲ್ಲಿ ಸತ್ಯನಾರಾಯಣ ರಾವ್ ಜೊತೆ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಫೌಂಡೇಶನ್‌ನ ಮಾಲಕ ಡಾ.ಗಣಪತಿ ಭಟ್ ಒಪ್ಪಂದ ಮಾಡಿಕೊಂಡು ದೂರನ್ನು ಹಿಂದಕ್ಕೆ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಮಂಗಳಾ ಆಸ್ಪತ್ರೆಯ ವಿರುದ್ಧ ದೂರು ನೀಡಿದ ಸತ್ಯನಾರಾಯಣರಾವ್ ವಿಚಾರಣೆಗೆ ಹಾಜರಾಗಲಿಲ್ಲ. ಮಂಗಳಾ ಆಸ್ಪತ್ರೆಯ ಎಂ.ಡಿ.ಗಣಪತಿ ಯವರು ಪತ್ರಿಕೆಗಳಲ್ಲಿ ಮಾನಹಾನಿಕರ ವರದಿ ಪ್ರಕಟವಾಗಿದೆ ಎಂದು ದ.ಕ. ಜಿಲ್ಲೆಯ ಮೂರನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಿದರು. ಈ ಬಗ್ಗೆ ಸುದೀರ್ಘವಾದ ವಿಚಾರಣೆ ನಡೆದು ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಪ್ರಕರಣದಲ್ಲಿ ಪತ್ರಿಕೆಗಳ ವಿರುದ್ಧದ ಆರೋಪವನ್ನು ನ್ಯಾಯಾಲಯ ತಳ್ಳಿ ಹಾಕಿದೆ. ತಳ್ಳಿ ಹಾಕಿ ಪ್ರಕರಣವನ್ನು ವಜಾಗೊಳಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ವಾರ್ತಾಭಾರತಿಯ ಪರವಾಗಿ ನ್ಯಾಯವಾದಿ ಎಂ.ಎನ್.ವಿನಯ ಕುಮಾರ್ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News