ಕೆಎಸ್ಸಾರ್ಟಿಸಿ ಅಧಿಕಾರಿಗಳ ಅವಲೋಕನಾ ಸಭೆ

Update: 2016-12-19 18:33 GMT

ಕಾಸರಗೋಡು, ಡಿ.19: 6 ತಿಂಗಳ ಅವಧಿಯಲ್ಲಿ ಜಿಲ್ಲೆಗೆ 29 ಹೊಸ ಕೆಎಸ್ಸಾರ್ಟಿಸಿ ಬಸ್‌ಗಳನ್ನು ಒದಗಿಸಲಾಗಿದೆ ಎಂದು ಕೇರಳ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್ ಹೇಳಿದರು.

 ಅವರು ಸೋಮವಾರ ಕಾಸರಗೋಡು ಸರಕಾರಿ ಅತಿಥಿಗೃಹದಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳ ಜೊತೆ ನಡೆದ ಅವಲೋಕನಾ ಸಭೆಯಲ್ಲಿ ಮಾತನಾಡುತ್ತಿದ್ದರು.
   ಕಾಸರಗೋಡು ಡಿಪೋಗೆ 23, ಕಾಞಂಗಾಡ್ ಡಿಪೋಗೆ ಆರು ನೂತನ ಬಸ್ಸುಗಳನ್ನು ಒದಗಿಸಲಾಗಿದೆ. ಕೆಎಸ್ಸಾರ್ಟಿಸಿ ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಉತ್ತಮ ಸೇವೆಗಳನ್ನು ನೀಡಲು ರಾಜ್ಯ ಸರಕಾರ ಸನ್ನದ್ಧವಾಗಿದೆ ಎಂದು ಸಚಿವರು ಹೇಳಿದರು.
    ಕಾಸರಗೋಡು ಮಂಗಳೂರು ದಾರಿಯಾಗಿ ಆರಂಭಿಸಿರುವ ಚೈನ್ ಸರ್ವಿಸ್ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಪ್ರತಿ ಮೂರು ನಿಮಿಷಕ್ಕೆ ಈ ದಾರಿಯಾಗಿ ಬಸ್ಸುಗಳು ಸಂಚಾರ ನಡೆಸುತ್ತಿದೆ. ಕರ್ನಾಟಕ  ಕೇರಳ ಜಂಟಿಯಾಗಿ ಈ ಸಂಚಾರ ನಡೆಸುತ್ತಿದೆ. ಕಾಸರಗೋಡು ಕಾಞಂಗಾಡ್ ರಸ್ತೆಯಲ್ಲಿ ಟೌನ್ ಟು ಟೌನ್ ಬಸ್ಸುಗಳು ಸಂಚಾರ ನಡೆಸುತ್ತಿದೆ ಎಂದು ಹೇಳಿದರು.
 ಕಾಸರಗೋಡು ಬಳಿಕ ಕಾಞಂಗಾಡ್ ಡಿಪೋದಲ್ಲೂ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಆರಂಭಿಸಲಾಗುವುದು ಎಂದು ಹೇಳಿದ ಸಚಿವರು ಜಲ ಮಾರ್ಗ ಯೋಜನೆಗೆ ರೂಪುರೇಷೆ ತಯಾರಿಸಲಾಗುವುದು ಎಂದರು.
ಕಂದಾಯ ಸಚಿವ ಇ.ಚಂದ್ರಶೇಖರನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ. ರಾಜಗೋಪಾಲ್, ಕೆ.ಕುಂಞಿರಾಮನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News