×
Ad

ಆಪ್ತ ಮಿತ್ರ ರಾಹುಲ್ ದ್ವಿಶತಕ ಮಿಸ್ ಮಾಡಿಕೊಂಡ ಬಗ್ಗೆ ತ್ರಿಶತಕ ವೀರ ಕರುಣ್ ಹೇಳಿದ್ದೇನು?

Update: 2016-12-20 10:04 IST

ಚೆನ್ನೈ, ಡಿ.20 : ಚೆನ್ನೈ ಟೆಸ್ಟ್ ನಲ್ಲಿ ತ್ರಿಶತಕ ಬಾರಿಸುವ ಮೂಲಕ ಕ್ರಿಕೆಟ್ ವಿಶ್ವಶ್ರೇಷ್ಠರ ಪಟ್ಟಿಗೆ ಸೇರ್ಪಡೆಯಾಗಿರುವ ಕನ್ನಡಿಗ ಕರುಣ್ ನಾಯರ್ ತಮ್ಮ ವಿಶೇಷ ಸಾಧನೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತ್ರಿಶತಕ ಬಾರಿಸಿದಾಗ ಏಕೆ ಭಾರೀ ಸಂಭ್ರಮ ವ್ಯಕ್ತಪಡಿಸಲಿಲ್ಲ ಎಂದು ಕೇಳಿದ್ದಕ್ಕೆ, " ಆ ಸಂದರ್ಭದಲ್ಲಿ ನಾನು ಏನೆಲ್ಲಾ ಮಾಡಬೇಕು ಎಂದು ನನಗೆ ಯೋಚನೆ ಬಂದಿತ್ತು. ಆದರೆ ಅದು ಹೊರಗೆ ಕಾಣಿಸಲಿಲ್ಲ . ಬಹುಶ ಇನ್ನಷ್ಟು ಶತಕಗಳನ್ನು ಬಾರಿಸಿದ ಮೇಲೆ ಆ ಸಂಭ್ರಮ ಕಾಣಬಹುದು " ಎಂದು ಹೇಳಿದ್ದಾರೆ  ಕರುಣ್. 

ಆತ್ಮೀಯ ಸ್ನೇಹಿತ ರಾಹುಲ್ ದ್ವಿಶತಕ ಮಿಸ್ ಮಾಡಿಕೊಂಡ ಬಗ್ಗೆ ಕೇಳಿದಾಗ " ನನಗೂ ಒತ್ತಡ ಇತ್ತು. ಕಳೆದ ಎರಡು ಟೆಸ್ಟ್ ಗಳಲ್ಲಿ ನಾನು ನಿರೀಕ್ಷಿತ ರನ್ ಸ್ಕೋರ್ ಮಾಡಿರಲಿಲ್ಲ. ಆದರೆ ಒತ್ತಡವನ್ನು ಬದಿಗಿಟ್ಟು ಆ ಸಂದರ್ಭಕ್ಕೆ ನಾವು ಪ್ರತಿಕ್ರಿಯಿಸಬೇಕಾಗಿದೆ. ಚೆಂಡನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ನಾನು ತ್ರಿಶತಕದ ಯೋಚನೆಯಲ್ಲಿ ಇರಲೇ ಇಲ್ಲ. 250 ರನ್ ಮಾಡಿದ ಮೇಲೆ ಆಕ್ರಮಣಕಾರಿ ಆಟವಾಡಿ ಇನ್ನಿಂಗ್ಸ್ ಡಿಕ್ಲೇರ್ ಮಾಡಲು ನನಗೆ ಸೂಚನೆ ಬಂತು. ಹಾಗಾಗಿ ಮುಂದಿನ ಐದು ಓವರ್ ಗಳಲ್ಲೇ ನಾನು 285 ಕ್ಕೆ ತಲುಪಿದೆ . ಆಗ ಜೊತೆಗಿದ್ದ ರವೀಂದ್ರ ಜಡೇಜಾ ಈ ಅವಕಾಶ ಬಿಡಬೇಡ, ಸುಲಭವಾಗಿ 300 ತಲುಪಬಹುದು ಎಂದು ಹೇಳಿ ಪ್ರೋತ್ಸಾಹ ನೀಡಿದ" ಎಂದು ಕರುಣ್ ಹೇಳಿದ್ದಾರೆ. 

"ನಾನು ಮತ್ತು ರಾಹುಲ್ ಜೊತೆಗೆ ಕ್ರಿಕೆಟ್ ಆಡಲು ಆರಂಭಿಸಿದೆವು. ಅಲ್ಲಿಂದ ನಾವು ಜೊತೆ ಜೊತೆಯೇ ಬೆಳೆದೆವು. ಪ್ರತಿ ಬಾರಿ ಆತ ಮುಂದೆ ಹೋದಾಗ ನಾನು ನಂತರ ಅದನ್ನು ಸಾಧಿಸುತ್ತಿದ್ದೆ. ನಾನು ಒಂದು ಹೆಜ್ಜೆ ಮುಂದೆ ಹೋದರೆ ಆತನೂ ಅಲ್ಲಿಗೆ ತಲುಪುತ್ತಿದ್ದ . ಹಾಗಾಗಿ ನಮ್ಮ ನಡುವೆ ಅಂತಹ ಆರೋಗ್ಯಕರ ಸ್ಪರ್ಧೆ ಇದೆ. ರಾಹುಲ್ ಈ ಬಾರಿ ಮಿಸ್ ಮಾಡಿಕೊಂಡಿದ್ದರೂ ಆತ ಬಹಳ ಬೇಗ ದ್ವಿಶತಕ ಬಾರಿಸುತ್ತಾನೆ " ಎಂದು ಕರುಣ್ ಹೇಳಿದ್ದಾರೆ. 

♦♦♦♦♦♦♦♦♦♦♦♦♦♦♦♦♦♦♦♦♦♦♦♦♦

ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?

ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News