×
Ad

ಮಹಾರಾಷ್ಟ್ರದಲ್ಲಿ ಬಿಜೆಪಿಯ 47ಮುಸ್ಲಿಮ್ ಕೌನ್ಸಿಲರ್‌ಗಳು !

Update: 2016-12-22 17:28 IST

ಮುಂಬೈ,ಡಿ.21: ಮಹಾರಾಷ್ಟ್ರ ಮುನ್ಸಿಪಾಲಿಟಿಗಳಲ್ಲಿ ಬಿಜೆಪಿಯ 47 ಮುಸ್ಲಿಂ ಕೌನ್ಸಿಲರ್‌ಗಳಿದ್ದಾರೆ. ಇಬ್ಬರು ಮುಸ್ಲಿಮರು ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿ ನೇರ ಆಯ್ಕೆಯಾಗಿದ್ದಾರೆ. ಇದು ಮುಸ್ಲಿಮರ ನಡುವೆ ಬಿಜೆಪಿಗೆ ಸಿಗುತ್ತಿರುವ ಮನ್ನಣೆ ಎಂದು ಮುಂಬೈ ಬಿಜೆಪಿ ಘಟಕದ ಉಪಾಧ್ಯಕ್ಷ ಹೈದರ್ ಆಝಂ ಎಂದು ಹೇಳಿದ್ದಾರೆ. ಮುಂಬರುವ ಮಾರ್ಚ್ ತಿಂಗಳಲ್ಲಿ ಮುಂಬೈ ನಗರಸಭೆಗೆ ಚುನಾವಣೆ ನಡೆಯಲಿದ್ದು, ಮುಸ್ಲಿಮರನ್ನು ಆಕರ್ಷಿಸಲು ಯೋಜನೆ ಬಿಜೆಪಿ ಸಿದ್ಧಪಡಿಸುತ್ತಿದೆ ಎಂದು ವರದಿಯೊಂದು ತಿಳಿಸಿದೆ.

ಹೆಚ್ಚು ಮುಸ್ಲಿಮರಿರುವ ಪ್ರದೇಶಗಳಲ್ಲಿ ಸಾಮಾಜಿಕ, ಸ್ವಯಂಸೇವಾ ಸಂಘಟನೆಗಳಿಂದ ಮುಸ್ಲಿಮ್ ವ್ಯಕ್ತಿಗಳನ್ನು ಆಕರ್ಷಿಸಿ ಚುನಾವಣೆಗೆ ನಿಲ್ಲಿಸಲು ಅದು ಬಯಸುತ್ತಿದೆ. ಮುಂಬೈನ ಬಾಂದ್ರ, ಕುರ್ಲಾ, ಮುಹಮ್ಮದಲಿ ರಸ್ತೆ ಮುಂತಾದ ಪ್ರದೇಶಗಳಿಂದ 25,000 ಮುಸ್ಲಿಂ ಯುವಕರು ಪಕ್ಷ ಸೇರಲು ಸಿದ್ಧರಾಗಿದ್ದಾರೆಂದು ಹೈದರ್ ಆಝಂ ತಿಳಿಸಿದ್ದಾರೆ.

ಬಿಜೆಪಿಯ ಮುಸ್ಲಿಂ ನಾಯಕರಾದ ಮುಖ್ತಾರ್ ಅಬ್ಬಾಸ್ ನಕ್ವಿ, ಶಾನವಾಝ್ ಹುಸೈನ್‌ರನ್ನು ಕರೆತಂದು ಮುಂಬೈಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸುವ ಯೋಜನೆ ಬಿಜೆಪಿಗಿದೆ. ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಗೆದ್ದ ಮುಸ್ಲಿಮ್ ಕೌನ್ಸಿಲರ್‌ಗಳಿಗೂ, ಹೊಸದಾಗಿ ಪಕ್ಷ ಸೇರುವ ಯುವಕರಿಗೂ ಮುಂಬೈನಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೈದರ್ ತಿಳಿಸಿದ್ದಾರೆ.

ಪಕ್ಷದತ್ತ ಮುಸ್ಲಿಮರನ್ನು ಹೆಚ್ಚು ಹೆಚ್ಚು ಆಕರ್ಷಿಸಲಿಕ್ಕಾಗಿ ಮಹಾರಾಷ್ಟ್ರದ ಬೇರೆಬೇರೆ ಜಿಲ್ಲೆಗಳಲ್ಲಿ ಗೆದ್ದ ಮುಸ್ಲಿಮ್ ಕೌನ್ಸಿಲರ್‌ಗಳನ್ನು ಮುಂಬೈಗೆ ಕರೆಸಿಕೊಂಡು ಅಭಿನಂದನೆ ಕಾರ್ಯಕ್ರಮ ಬಿಜೆಪಿ ಹಮ್ಮಿಕೊಳ್ಳುತ್ತಿದೆ. ಪ್ರಧಾನಿ ಮೋದಿ ನೀಡಿದ"ಮುಸ್ಲಿಂ ಯುವಕರ ಒಂದು ಕೈಯಲ್ಲಿ ಕಂಪ್ಯೂಟರ್, ಇನ್ನೊಂದು ಕೈಯಲ್ಲಿ ಪವಿತ್ರಕುರ್‌ಆನ್ ಇರುವುದನ್ನು ನೋಡಲು ತಾನು ಬಯಸುತ್ತಿದ್ದೇನೆ" ಎನ್ನುವ ಹೇಳಿಕೆ ಮುಸ್ಲಿಮ್ ಯುವಕರನ್ನು ಹೆಚ್ಚು ಆಕರ್ಷಿಸಿದೆ ಎಂದು ಹೈದರ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News