×
Ad

ನೋಟು ಅಮಾನ್ಯ: ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ

Update: 2016-12-22 18:08 IST

ನಮ್ಮ  ಪ್ರಧಾನಿಯವರು ಕ್ಯಾಶ್‌ಲೆಸ್ ಇಕಾನಮಿ ಮಾಡುವ ಬೇಸ್‌ಲೆಸ್‌ವಿಚಾರಗಳನ್ನು ಜನಸಾಮಾನ್ಯರ ಮೇಲೆ ಹೇರಲು ಹೊರಟಿದ್ದಾರೆ. ಈ ನಡುವೆ ಪೆಟ್ರೋಲ್ ಬಳಕೆಗೆ ಕಾಡ್ ಬಳಸಿದರೆ 0.75% ಡಿಸ್ಕೌಂಟ್ ಘೋಷಸಿದರು. ಆದರೆ ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಅಥವಾ ಡಿಸೇಲ್ ಖರೀದಿಸಿದರೆ 2.5 % ಸರ್‌ಚಾರ್ಜ್ ಇರುತ್ತದೆ ಎಂಬುದು ಕೆಲವು ‘ಮೋದಿಪ್ರಿಯ’ರಿಗೆ ಗೊತ್ತಾಗಿದ್ದು ಕಾರ್ಡು ಬಳಸಿದ ನಂತರವೇ.

 ಇನ್ನು ಕೆಲವರು ಚೆಕ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನೆಫ್ಟ್ ಬಳಸಿ ಅನ್ನೋ ಸಲಹೆ ನೀಡಿ ಅಲ್ಲಲ್ಲಿ ತರಬೇತಿ ಶಿಬಿರವನ್ನೂ ಆಯೋಜಿಸುತ್ತಿದ್ದಾರೆ. ಆದರೆ ಇದು ಜನಸಾಮಾನ್ಯರ ನಗು ಇಲ್ಲದಂತೆ ಮಾಡುವ ನಗದುರಹಿತ ನಮೋ ತರಬೇತಿಯಿದು. ವಾಸ್ತವದಲ್ಲಿ ಭಾರತದ ಅರ್ಧದಷ್ಟೂ ಜನರಿಗೆ ಇನ್ನೂ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಸಮರ್ಪಕ ಜ್ಞಾನವೇ ಇಲ್ಲ. ಜನಧನ್ ಯೋಜನೆ ಬಂದಾಗ ಮೋದಿ 5,000 ಕೊಡ್ತಾರೆ ಎಂದು ಬ್ಯಾಂಕ್ ಕಡೆ ಬಂದವರು ಈಗ ತಾವು ದುಡಿದ 1,000 ರೂಪಾಯಿಗೂ ಗಂಟೆಗಟ್ಟಲೆ ಕ್ಯೂ ನಿಲ್ಲುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಜೋಕ್‌ವೊಂದು ಹೀಗಿತ್ತು... ’’ಕ್ಯೂ ನಿವಾರಿಸಲು ವಿಜ್ಞಾನಿ ಎಟಿಎಂ ತೆರೆದ... ಅಜ್ಞಾನಿ ಮತ್ತೆ ಎಟಿಎಂ ಮುಂದೆ ಕ್ಯೂ ತರಿಸಿದ’’..

 ಇನ್ನೂ ರಿಸರ್ವ್ ಬ್ಯಾಂಕ್ ಮಾಹಿತಿ ಪ್ರಕಾರ ಚಲಾವಣೆಯಲ್ಲಿರುವ 14.5 ಲಕ್ಷ ಕೋಟಿ ರೂ. ನೋಟುಗಳಲ್ಲಿ ಈಗಾಗಲೇ 12.5 ಲಕ್ಷ ಕೋಟಿ ರೂ. ಬದಲಾಗಿದೆ. ಇನ್ನು 2 ಲಕ್ಷ ಕೋಟಿ ರೂ. ಮುಂದಿನ 20 ದಿನಗಳಲ್ಲಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಹಾಗಾದರೆ ಕಪ್ಪುಹಣದ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ವಿಫಲವಾದಂತಾಗಿಲ್ಲವೇ? ಇನ್ನು ನೂರೋ ಇನ್ನೂರೊ ಕೋಟಿ ರೂ. ವಾಪಸ್ ಬಂದಿಲ್ಲವೆಂದರೂ ಆ ಮೊತ್ತ ಹೊಸ ನೋಟಿನ ಮುದ್ರಣಕ್ಕೆ ಬಳಸಿದ ವೆಚ್ಚಕ್ಕಿಂತ ಕಡಿಮೆಯೇ ಆಗಿರುತ್ತದೆ.

 ಇನ್ನು ‘ಮಿತ್ರೋಂ.. ಕ್ಯಾಶ್‌ಲೆಸ್ ಕ್ಯಾಶ್‌ಲೆಸ್’’ ಎಂದು ಉಪದೇಶ ನೀಡುವ ಪ್ರಧಾನಿಯವರು ದೇಶದಲ್ಲಿ ಅದೆಷ್ಟೋ ರಾಜಕಾರಣಿಗಳಿಗೂ ಮೊಬೈಲ್ ಬ್ಯಾಂಕಿಂಗ್‌ತಂತ್ರಜ್ಞಾನದ ಬಳಕೆಗೆ ಬೇಕಾಗಿರುವಷ್ಟು ಶಿಕ್ಷಣ ಇಲ್ಲ ಎಂಬ ವಾಸ್ತವವನ್ನು ಅರಿತಿಲ್ಲ. ನಮ್ಮ ದೇಶವನ್ನು 18 ತಿಂಗಳುಗಳ ಕಾಲ ಆಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರಿಗೂ ಕೂಡಾ ಮೊಬೈಲ್ ತಂತ್ರಜ್ಞಾನ ಬಳಸೋದು ಗೊತ್ತಿಲ್ಲವಂತೆ! ಹಾಗಾದರೆ ಜನಸಾಮಾನ್ಯರ ಪಾಡೇನು?

ಬೆಂಗಳೂರಿನಂತಹ ಮಹಾನಗರದಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲೂ ಸುಮಾರು 20 ಲಕ್ಷ ರೂ. ವಹಿವಾಟು ನಡೆಯುತ್ತದೆ. ಈ ಎಲ್ಲ ವ್ಯವಹಾರವನ್ನು ನಡೆಸುವವರು ರೈತರು, ಜಾನುವಾರು ಮಾರಾಟಗಾರರು, ಗ್ರಾಮೀಣ ಪ್ರದೇಶದ ಕೃಷಿ ಬೆಳೆಗಾರರು. ಇವರಿಗೆ ಮೊಬೈಲ್ ಬ್ಯಾಂಕಿಂಗ್ ಬಿಡಿ, ಸರಿಯಾದ ಬ್ಯಾಂಕ್ ಅಕೌಂಟ್‌ಕೂಡಾ ಇರೋದಿಲ್ಲ. ವಾರದ ಸಂತೆ ಎಂಬುದು ರಾಜ್ಯದ ಎಲ್ಲ ಭಾಗಗಳಲ್ಲಿಯೂ ನಡೆಯುವ ಜನಸಾಮಾನ್ಯರ ಗ್ರಾಮೀಣ ವ್ಯಾಪಾರ. ಇವೆಲ್ಲ ವ್ಯಾಪಾರವನ್ನು ರದ್ದುಗೊಳಿಸಿ ನೇರವಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಒದಗಿಸುವ ತಂತ್ರವಾಗಿದೆ ಕ್ಯಾಶ್‌ಲೆಸ್.

2017ರ ವೇಳೆಗೆ 47 ಲಕ್ಷ ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿರುವ ಬೃಹತ್ ಮಳಿಗೆಗಳಿಗೆ ಕ್ಯಾಶ್‌ಲೆಸ್ ತಂತ್ರದ ಮೂಲಕ ಮೋದಿ ಸರಕಾರ ಚುನಾವಣಾ ಪ್ರಚಾರ ವೆಚ್ಚದ ಋಣ ತೀರಿಸುತ್ತಿದೆ. ಜೊತೆಗೆ ವಿದೇಶ ಸುತ್ತಲು ಮೋದಿಗೆ 800 ಕೋಟಿ ರೂ. ವ್ಯಯಿಸಿರುವ ದೈತ್ಯ ಕಂಪೆನಿಗಳ ಮಾಲಕರ ಋಣವನ್ನು ತೀರಿಸಲು ಇನ್ನಷ್ಟು ಇಂತಹ ’’ನಗ’’ದು ರಹಿತ ಯೋಜನೆಗಳು ಜಾರಿಗೆ ಬರುವ ಸಾಧ್ಯತೆ ಇವೆ.

 ನೋಟು ರದ್ದು ಮಾಡಿ ಕಾಳಧನವನ್ನು, ಭ್ರಷ್ಟಾಚಾರ ಕೊನೆಗೊಳಿಸುತ್ತೇನೆ ಎಂಬ ತೀರ್ಮಾನ, ತನ್ನ ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದ್‌ಗೆ ವರ್ಗಾಯಿಸಿದ ತುಘಲಕ್‌ನ ಮೂರ್ಖ ತೀರ್ಮಾನದಂತಾಗಿರುವುದು ಸುಳ್ಳಲ್ಲ. ಈಗಾಗಲೇ ಸುಪ್ರೀಂ ಕೋರ್ಟು ನೋಟು ಅಮಾನ್ಯ ವಿಷಯದಲ್ಲಿ ಜನಸಾಮಾನ್ಯರಿಗೆ ಆಗುವ ತೊಂದರೆ ನಿವಾರಿಸಿ, ಇಲ್ಲದಿದ್ದಲ್ಲಿ ಇದರ ವಿರುದ್ಧ ಆದೇಶ ಹೊರಡಿಸಬೇಕಾಗಬಹುದು ಎಂದು ಕೇಂದ್ರ ಸರಕಾರಕ್ಕೆ ಛೀಮಾರಿ ಹಾಕಿ ಎಚ್ಚರಿಸಿದೆ. ಭ್ರಷ್ಟಾಚಾರದ ವಿರುದ್ಧದ ಸರ್ಜಿಕಲ್ ಸ್ಟ್ರೈಕ್ ಎಂದು ಬೊಬ್ಬೆ ಇಡುವ ‘ಮೋದಿಪ್ರಿಯ’ರಿಗೆ ನೋಟುಗಳನ್ನು ಪ್ರಿಂಟ್ ಮಾಡಲು ಪೇಪರನ್ನು ಭಾರತದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾದ ಕಂಪೆನಿಯಿಂದ ತರಿಸಲಾಗುತ್ತಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದ ಅಂಧರಾಗಿಬಿಟ್ಟಿದ್ದಾರೆ. ಅಂಧ ಯೋಜನೆ ಅಂಧರಿಗಷ್ಟೇ ಅಂದವಾಗಿ ಕಾಣಲು ಸಾಧ್ಯ.

Writer - ಶಾಹುಲ್ ಹಮೀದ್ ಕಾಶಿಪಟ್ಣ

contributor

Editor - ಶಾಹುಲ್ ಹಮೀದ್ ಕಾಶಿಪಟ್ಣ

contributor

Similar News