×
Ad

ಡೇವಿಸ್‌ಕಪ್ ನಾಯಕನಾಗಿ ಮಹೇಶ್ ಭೂಪತಿ ಆಯ್ಕೆ

Update: 2016-12-22 23:48 IST

ಹೊಸದಿಲ್ಲಿ, ಡಿ.22: ಡೇವಿಸ್‌ಕಪ್‌ನಲ್ಲಿ ಆಟವಾಡದ ನಾಯಕ ಆನಂದ್ ಅಮೃತರಾಜ್‌ರ ಉತ್ತರಾಧಿಕಾರಿಯಾಗಿ ಹಿರಿಯ ಟೆನಿಸ್ ಪಟು ಮಹೇಶ್ ಭೂಪತಿ ಗುರುವಾರ ಆಯ್ಕೆಯಾಗಿದ್ದಾರೆ.

2017ರ ಫೆಬ್ರವರಿಯಲ್ಲಿ ಆನಂದ್ ಅಮೃತ್‌ರಾಜ್‌ರಿಂದ ಭೂಪತಿ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಅಖಿಲ ಭಾರತ ಟೆನಿಸ್ ಸಂಸ್ಥೆ(ಎಐಟಿಎ) ಪುಣೆಯಲ್ಲಿ ಫೆ.3 ರಿಂದ 5ರ ತನಕ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಏಷ್ಯಾ/ಒಶಿಯಾನಿಯ ಮೊದಲ ಸುತ್ತಿನ ಡೇವಿಸ್‌ಕಪ್ ಟೂರ್ನಿಗೆ ಗುರುವಾರ ತಂಡವನ್ನು ಆಯ್ಕೆ ಮಾಡಿದೆ. ಸಾಕೇತ್ ಮೈನೇನಿ, ರಾಮ್‌ಕುಮಾರ್ ರಾಮನಾಥನ್, ಯೂಕಿ ಭಾಂಬ್ರಿ, ಲಿಯಾಂಡರ್‌ಪೇಸ್ ಹಾಗೂ ಪ್ರಜ್ನೇಶ್ ಗುಣೇಶ್ವರನ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಟೂರ್ನಿ ಆರಂಭವಾಗಲು ಎರಡು ವಾರ ಬಾಕಿ ಇರುವಾಗ ಅಂತಿಮ ನಾಲ್ವರ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಎಐಟಿಎ ಹೇಳಿದೆ.

 ‘‘ಎಲ್ಲರಿಗೂ ನಾಯಕನಾಗುವ ಅವಕಾಶವಿರಬೇಕು. ಒಂದೇ ವ್ಯಕ್ತಿಯ ಬಳಿ ಹುದ್ದೆ ಉಳಿಯಬಾರದು. ನ್ಯೂಝಿಲೆಂಡ್ ವಿರುದ್ಧ ಫೆ.3 ರಿಂದ ಆರಂಭವಾಗಲಿರುವ ಟೂರ್ನಿಯು ಡೇವಿಸ್‌ಕಪ್‌ನ ಆಟವಾಡದ ನಾಯಕ ಅಮೃತರಾಜ್‌ಗೆ ವಿದಾಯದ ಪಂದ್ಯವಾಗಿರಲಿದೆ’’ ಎಂದು ಎಐಟಿಎ ಪ್ರಧಾನ ಕಾರ್ಯದರ್ಶಿ ಹಿರೇನ್ಮಯ್ ಚಟರ್ಜಿ ಹೇಳಿದ್ದಾರೆ.

ಅಮೃತ್‌ರಾಜ್ ಈ ನಿರ್ಧಾರದಿಂದ ಸಂತುಷ್ಟರಾಗಿದ್ದಾರೆಯೇ? ಎಂದು ಕೇಳಿದಾಗ,‘‘ ಇಲ್ಲ ಯಾರೂಕೂಡ ಹುದ್ದೆ ಬಿಟ್ಟುಕೊಡಲು ಬಯಸುವುದಿಲ್ಲ. ಆದರೆ, ಪ್ರತಿಯೊಬ್ಬರಿಗೂ ನಾಯಕನಾಗುವ ಅರ್ಹತೆಯಿದೆ’’ ಎಂದು ಚಟರ್ಜಿ ಉತ್ತರಿಸಿದರು.

ಭೂಪತಿ ಯಾವ ಬೇಡಿಕೆಯನ್ನು ಸಲ್ಲಿಸಿಲ್ಲ. ಡೇವಿಸ್‌ಕಪ್ ಆಟವಾಡದ ನಾಯಕನಾಗಿರಲು ಒಪ್ಪಿಕೊಂಡಿದ್ದಾರೆ. ಡೇವಿಸ್‌ಕಪ್ ವೇತನದ ಶ್ರೇಣಿಯಂತೆಯೇ ಅವರಿಗೆ ಸಂಭಾವನೆ ನೀಡಲಾಗುತ್ತದೆ ಎಂದು ಚಟರ್ಜಿ ತಿಳಿಸಿದರು.

ಕನ್ನಡಿಗ ರೋಹನ್ ಬೋಪಣ್ಣಗೆ ಸ್ಥಾನವಿಲ್ಲ

 ಹೊಸದಿಲ್ಲಿ, ಡಿ.22: ಮಾಜಿ ಯುಎಸ್ ಓಪನ್ ಫೈನಲಿಸ್ಟ್ ಹಾಗೂ ಎರಡು ಬಾರಿಯ ಒಲಿಂಪಿಯನ್ ರೋಹನ್ ಬೋಪಣ್ಣರನ್ನು ನ್ಯೂಝಿಲೆಂಡ್ ವಿರುದ್ಧದ ಡೇವಿಸ್‌ಕಪ್ ಟೂರ್ನಿಗೆ ಆಯ್ಕೆ ಮಾಡಲಾದ ಭಾರತ ತಂಡದಿಂದ ಕೈಬಿಡಲಾಗಿದೆ.

ಸ್ಪೇನ್ ವಿರುದ್ಧದ ಈ ಹಿಂದಿನ ಡೇವಿಸ್ ಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಲಿಯಾಂಡರ್ ಪೇಸ್ ಹಾಗೂ ಸಾಕೇತ್ ಮೈನೇನಿ ಅವರನ್ನು ಡಬಲ್ಸ್ ಜೋಡಿಯಾಗಿ ಆಯ್ಕೆ ಮಾಡಲು ಎಐಟಿಎ ಆಯ್ಕೆ ಸಮಿತಿ ನಿರ್ಧರಿಸಿತು.

ಡಬಲ್ಸ್ ಜೋಡಿಯಾಗಿ ರೋಹನ್ ಹಾಗೂ ಸಾಕೇತ್ ಉತ್ತಮ ಪ್ರದರ್ಶನ ನೀಡಿಲ್ಲ. ಪೇಸ್‌ಗೆ ಈಗ 43 ವರ್ಷ. ಅವರು ಇನ್ನೆಷ್ಟು ದಿನ ಆಡಲು ಸಾಧ್ಯ. ರೋಹನ್(36 ವರ್ಷ) ಯುವ ಆಟಗಾರರಾಗಿದ್ದು, ಮುಂದಿನ ದಿನಗಳಲ್ಲಿ ತಂಡಕ್ಕೆ ವಾಪಸ್ ಬರಬಹುದು ಎಂದು ಆಯ್ಕೆ ಸಮಿತಿಯ ಸದಸ್ಯರಾದ ಎಸ್‌ಪಿ ಮಿಶ್ರಾ ಹೇಳಿದ್ದಾರೆ.

ಸೋಮ್‌ದೇವ್ ದೇವ್‌ವರ್ಮನ್‌ರನ್ನು ಆಯ್ಕೆಗೆ ಪರಿಗಣಿಸದ ಬಗ್ಗೆ ಪ್ರತಿಕ್ರಿಯಿಸಿದ ಮಿಶ್ರಾ,‘‘ಅವರು ದೀರ್ಘ ಸಮಯದಿಂದ ಯಾವುದೇ ಟೂರ್ನಿಗಳಲ್ಲಿ ಆಡಿಲ್ಲ. ಅವರು ಮೊದಲಿಗೆ ಸ್ಪರ್ಧಾತ್ಮಕ ಟೆನಿಸ್ ಆಡಿದ ಬಳಿಕ ಅವರನ್ನು ಆಯ್ಕೆಗೆ ಪರಿಗಣಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News