×
Ad

ಮಣಿಪುರ: ಮೂರು ಸರಕಾರಿ ಕಚೇರಿಗಳಿಗೆ ಬೆಂಕಿ

Update: 2016-12-23 18:50 IST

ಇಂಫಾಲ, ಡಿ.23: ಸಂಯುಕ್ತ ನಾಗಾ ಮಂಡಳಿಯಿಂದ ಆರ್ಥಿಕ ತಡೆ ಹೇರಲ್ಪಟ್ಟಿರುವ ಮಣಿಪುರದಲ್ಲಿ ಅಜ್ಞಾತ ವ್ಯಕ್ತಿಗಳು, ಇತ್ತೀಚೆಗೆ ಸೃಷ್ಟಿಯಾಗಿರುವ ಕಾಂಜೋಂಗ್ ಜಿಲ್ಲಾ ಕಚೇರಿ ಸಹಿತ ಮೂರು ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ.

ನಸುಕಿನ ಸುಮಾರು 3 ಗಂಟೆಯ ವೇಳೆ ಬಂದ 5-6 ಮಂದಿ ಅಜ್ಞಾತರು ಉಪವಿಭಾಗೀಯ ಕಚೇರಿಗೆ ಬೆಂಕಿ ಹಚ್ಚಿದರೆಂದು ಹೊಸದಾಗಿ ನೇಮಕಗೊಂಡಿರುವ ಕಾಂಜೋಂಗ್ ಜಿಲ್ಲಾಧಿಕಾರಿ ಆರ್ಮ್‌ಸ್ಟ್ರಾಂಗ್ ಪಮೆ ಪಿಟಿಐಗೆ ತಿಳಿಸಿದ್ದಾರೆ.

ಕಾಂಜೋಂಗ್ ಜಿಲ್ಲಾ ಕಚೇರಿಯನ್ನು ತಾತ್ಕಾಲಿಕವಾಗಿ ಎಸ್‌ಡಿಒ ಕಚೇರಿಯಲ್ಲಿ ಸ್ಥಾಪಿಸಲಾಗಿತ್ತು. ಹೊಸ ಜಿಲ್ಲಾ ಕಚೇರಿ ಇನ್ನಷ್ಟೇ ಉದ್ಘಾಟನೆಗೊಳ್ಳಬೇಕಿದೆಯೆಂದು ಅವರು ಹೇಳಿದ್ದಾರೆ.

ಉಕ್ರುಲ್ ಜಿಲ್ಲೆಯನ್ನು ವಿಭಜಿಸಿ ಹೊಸ ಕಾಂಜೋಂಗ್ ಜಿಲ್ಲೆಯ ರಚನೆಯನ್ನು ತಂಗ್ಲುಕ್ ನಾಗಾ ಲೋಂಗ್ ಹಾಗೂ ಸಂಯುಕ್ತ ನಾಗಾ ಮಂಡಳಿ ಸಹಿತ ಮಣಿಪುರದ ವಿವಿಧ ನಾಗಾ ನಾಗರಿಕ ಸಂಘಟನೆಗಳು ಪ್ರಬಲವಾಗಿ ವಿರೋಧಿಸಿದ್ದವು.

ಇನ್ನೊಂದು ಘಟನೆಯಲ್ಲಿ ಉಕ್ರುಲ್ ಜಿಲ್ಲೆಯ ಮಿನಿ ವಿಧಾನಸೌಧದ ಎರಡು ಕೊಠಡಿಗಳಿಗೆ ಇಂದು ನಸುಕಿನಲ್ಲಿ ಅಜ್ಞಾತ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News