ಬಂಡಾಯ ಶಾಸಕರಿಗೆ ಲಂಚ: ಉತ್ತರಾಖಂಡ್ ಮುಖ್ಯಮಂತ್ರಿಗೆ ಮತ್ತೆ ಸಿಬಿಐ ಸಮನ್ಸ್
Update: 2016-12-23 18:57 IST
ಹೊಸದಿಲ್ಲಿ, ಡಿ.23: ಕುಟುಕು ಕಾರ್ಯಾಚರಣೆಯೊಂದಕ್ಕೆ ಸಂಬಂಧಿಸಿ ಡಿ.26ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್‌ಗೆ ಸಿಬಿಐ ಸೂಚಿಸಿದೆ.
ತಾನು ದಾಖಲಿಸಿರುವ ಪ್ರಾಥಮಿಕ ತನಿಖೆಯ (ಪಿಇ) ಸಂಬಂಧ ಕಳೆದ 7 ತಿಂಗಳಲ್ಲಿ ರಾವತ್‌ಗೆ ಸಿಬಿಐ ಸಮನ್ಸ್ ಕಳುಹಿಸಿರುವುದು ಇದು 2ನೆಯ ಸಲವಾಗಿದೆ. ಮೇ 24ರಂದು ರಾವತ್ ತನಿಖೆ ಸಂಸ್ಥೆಯ ಮುಂದೆ ಹಾಜರಾಗಿದ್ದ ವೇಳೆ ಸುಮಾರು 5 ತಾಸುಗಳ ಕಾಲ ಅವರ ವಿಚಾರಣೆ ನಡೆಸಲಾಗಿತ್ತು.
ಉತ್ತರಾಖಂಡ ವಿಧಾನಸಭೆಯಲ್ಲಿ ವಿಶ್ವಾಸಮತದ ವೇಳೆ ತನ್ನನ್ನು ಬೆಂಬಲಿಸುವಂತೆ ಬಂಡುಕೋರ ಕಾಂಗ್ರೆಸ್ ಶಾಸಕರಿಗೆ ರಾವತ್ ಎ.29ರಂದು ಲಂಚ ನೀಡುತ್ತಿದ್ದುದನ್ನು ತೋರಿಸುವ ಕುಟುಕು ಕಾರ್ಯಾಚರಣೆಯ ಸಿಡಿಯೊಂದನ್ನು ಆಧರಿಸಿ ಸಿಬಿಐ ಪ್ರಾಥಮಿಕ ತನಿಖೆಯೊಂದನ್ನು ದಾಖಲಿಸಿತ್ತು.