ಜಾತಿ ನಿಂದನೆ ಮಾಡಿದ ಪ್ರಾಧ್ಯಾಪಕನ ವಿರುದ್ಧ ದೂರು ನೀಡಿದ ಕಾನೂನು ವಿದ್ಯಾರ್ಥಿ ಅಮಾನತು
ಎರ್ನಾಕುಲಂ(ಕೇರಳ), ಡಿ.23: ಪ್ರೊಫೆಸರ್‌ರೊಬ್ಬರು ತನ್ನ ಜಾತಿ ನಿಂದನೆ ಮಾಡಿದರೆಂದು ಪೊಲೀಸರಿಗೆ ದೂರು ನೀಡಿದ್ದ, ಎರ್ನಾಕುಲಂ ಕಾನೂನು ಕಾಲೇಜಿನ 24ರ ಹರೆಯದ ವಿದ್ಯಾರ್ಥಿಯೊಬ್ಬನನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ.
ಪ್ರೊಫೆಸರ್ ಒಬ್ಬರನ್ನು ಬೈದ ಆರೋಪದಲ್ಲಿ ಮೂರನೆ ವರ್ಷದ ಕಾನೂನು ವಿದ್ಯಾರ್ಥಿಯನ್ನು ಅಮಾನತುಪಡಿಸಲಾಗಿದೆ.
ಎರ್ನಾಕುಲಂ ಕಾನೂನು ಕಾಲೇಜಿನ ಪದವಿ ವಿದ್ಯಾರ್ಥಿ ವೈಶಾಖ್.ಡಿ.ಎಸ್ ಎಂಬಾತನನ್ನು ವಿಚಾರಣೆ ಮುಗಿಯುವವರೆಗೆ ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ. ಕಾಲೇಜಿನ ಅಧಿಕಾರಿಗಳು ಡಿ.19ರಂದು ಆತನ ವಿರುದ್ಧ ಪೊಲೀಸ್ ದೂರೊಂದನ್ನು ದಾಖಲಿಸಿದ್ದರು.
ಪ್ರಾಧ್ಯಾಪಕರ ವಿರುದ್ಧ ಕೆಟ್ಟ ಭಾಷೆಯನ್ನು ಬಳಸಿದುದಕ್ಕಾಗಿ ವೈಶಾಖ್‌ನನ್ನು ಅಮಾನತುಪಡಿಸಲಾಗುತ್ತಿದೆಯೆಂದು ಆದೇಶದಲ್ಲಿ ಹೇಳಲಾಗಿದೆ.
ತನ್ನನ್ನು ಸಾರ್ವಜನಿಕವಾಗಿ ಜಾತಿಯ ಹೆಸರಿನಲ್ಲಿ ನಿಂದನೆ ಮಾಡಿದುದಕ್ಕಾಗಿ ಸಹಾಯಕ ಪ್ರೊಫೆಸರ್ ಗಿರಿ ಶಂಕರ್ ಎಂಬವರ ವಿರುದ್ಧ ವೈಶಾಖ್ ಸಹ ಪೊಲೀಸ್ ದೂರನ್ನು ದಾಖಲಿಸಿದ್ದಾನೆ.
ಡಿ.16ರಂದು ನಯಂ ಕಲೋತ್ಸವದ ವೇಳೆ ಈ ಘಟನೆ ನಡೆದಿದೆ. ಉತ್ಸವ ಮುಗಿದ ಬಳಿಕ ಆ ಪ್ರೊಫೆಸರ್, ಸಮಾರೋಪ ಸಮಾರಂಭದಲ್ಲಿ ಒಟ್ಟಿಗೆ ನೃತ್ಯ ಮಾಡಿದುದಕ್ಕಾಗಿ ಹುಡುಗರು ಹಾಗೂ ಹುಡುಗಿಯರನ್ನು ಟೀಕಿಸಿದ್ದರು. ಅನೇಕ ವಿದ್ಯಾರ್ಥಿಗಳೊಂದಿಗೆ ತಾವು ಈ ಬಗ್ಗೆ ಅವರನ್ನು ಪ್ರಶ್ನಿಸಿದೆವು. ತಾನು ಮೊದಲು ಮಾತನಾಡಿದವನಾದ ಕಾರಣ ತನಗೆ ಅವರು, ‘‘ನೀನು ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದವನು. ನೀನಿಲ್ಲಿ ಸರಕಾರ ಹಾಗೂ ನನ್ನಂತಹ ಜನರ ಕರುಣೆಯಿಂದ ಕಲಿಯುತ್ತಿದ್ದಿ ಹಾಗೂ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಿ’’ ಎಂದು ಗರ್ಜಿಸಿದರೆಂದು ವೈಶಾಕ್ ‘ದಿ ನ್ಯೂಸ್ ಮಿನಿಟ್’ಗೆ ತಿಳಿಸಿದ್ದಾನೆ.