ನೋಟು ಅಮಾನ್ಯ ನಿರ್ಧಾರ ಆರ್ಥಿಕ ದರೋಡೆ: ರಾಹುಲ್ ಗಾಂಧಿ

Update: 2016-12-23 14:17 GMT

ಅಲ್ಮೊರಾ, ಡಿ.23: ದೇಶದಿಂದ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಲು ಕಾಂಗ್ರೆಸ್ ಪಕ್ಷ ಬಯಸುತ್ತದೆ. ಭ್ರಷ್ಟಾಚಾರದ ವಿರುದ್ಧ ಕೈಗೊಳ್ಳಲಾಗುವ ಯಾವುದೇ ಕ್ರಮವನ್ನು ಪಕ್ಷ ಬೆಂಬಲಿಸುತ್ತದೆ. ಆದರೆ ನೋಟು ಅಮಾನ್ಯ ನಿರ್ಧಾರವು ಕಪ್ಪುಹಣ ಅಥವಾ ಭ್ರಷ್ಟಾಚಾರದ ವಿರುದ್ಧ ಕೈಗೊಂಡ ಕ್ರಮಗಳಲ್ಲ. ಇದೊಂದು ಆರ್ಥಿಕ ದರೋಡೆಯಾಗಿದೆ ಎಂದು ಕಾಂಗ್ರೆಸ್ ಉಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ರ್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಧಾನಿ ಮೋದಿ ರೈತರ ಬವಣೆ ಆಲಿಸುತ್ತಿಲ್ಲ. ಆದರೆ 15 ಮಂದಿ ಶ್ರೀಮಂತರಿಂದ ಬರಬೇಕಾದ 1.40 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದವರು ಹೇಳಿದರು.

  ಸಂಸತ್ತಿನಲ್ಲಿ ಕಾರ್ಮಿಕರ ಬಗ್ಗೆ ಮಾತನಾಡಿದ ಮೋದಿ, ಕಾರ್ಮಿಕರನ್ನು ಬಿಲ ತೋಡುವವರು ಎಂದು ಕರೆದು ತಮಾಷೆ ಮಾಡಿದ್ದರು. ಆದರೆ ಮೋದೀಜಿ, ಭಾರತದ ಕಾರ್ಮಿಕರು ಬಿಲ ತೋಡುವುದಿಲ್ಲ, ಅವರು ದೇಶವನ್ನು ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ನೀವು ದೇಶವನ್ನು ಎರಡು ಭಾಗವಾಗಿ ಮಾಡಿದ್ದೀರಿ. ಒಂದು ಭಾಗದಲ್ಲಿ ಭಾರತದ 50 ಮಂದಿ ಅಗರ್ಭ ಶ್ರೀಮಂತರಿಂದ ಕೂಡಿದ ಶೇ.1ರಷ್ಟು ಮಂದಿ, ಇನ್ನೊಂದು ಭಾಗದಲ್ಲಿ ದೇಶದ ಶೇ.99 ಮಂದಿ ಇದ್ದಾರೆ. ಬಡವರು, ಪ್ರಾಮಾಣಿಕರು, ಶ್ರಮಜೀವಿಗಳು ಈ ಶೇ. 99ರ ಭಾಗದಲ್ಲಿದ್ದಾರೆ. ಎನ್‌ಡಿಎ ಆಡಳಿತದಲ್ಲಿ ದೇಶದ ಸಂಪತ್ತಿನ 60 ಶೇಕಡಾದಷ್ಟು ಪಾಲು ಶೇ.1ರ ಭಾಗದಲ್ಲಿರುವ ಜನರ ಬಳಿಯಿದೆ ಎಂದು ರಾಹುಲ್ ಹೇಳಿದರು.

  ಕಪ್ಪುಹಣದ ಶೇ.94ರಷ್ಟು ಪಾಲು ಸ್ವಿಸ್ ಬ್ಯಾಂಕ್ ಖಾತೆ, ಚಿನ್ನ ಮತ್ತು ಆಸ್ತಿಯ ರೂಪದಲ್ಲಿದೆ. ಕೇವಲ ಶೇ.6ರಷ್ಟು ಕಪ್ಪುಹಣ ನಗದಿನ ರೂಪದಲ್ಲಿದೆ. ಮೋದಿಯವರು ಈ ಶೇ.6ರಷ್ಟಿರುವ ಕಪ್ಪುಹಣವನ್ನು ತಮ್ಮ ಗುರಿಯಾಗಿಸಿಕೊಂಡಿರುವುದು ದೇಶದ ದುರಂತ ಎಂದರು.

  ಕಪ್ಪುಹಣದ ವಿರುದ್ಧದ ಹೋರಾಟ ಎನ್ನುತ್ತಾ ಬಡಜನರನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ. ಉದ್ಯಮಿ ವಿಜಯ ಮಲ್ಯರಿಗೆ 1,200 ಕೋಟಿ ರೂಪಾಯಿಯ ಮಿಠಾಯಿ ತಿನ್ನಿಸಿದ್ದೀರಿ. ಆದರೆ ಉತ್ತರಾಖಂಡದ ಜನತೆಗೆ ನಯಾಪೈಸೆ ಕೂಡಾ ನೀಡಲಿಲ್ಲ. ಇದು ಸೂಟ್‌ಬೂಟ್ ಸರಕಾರ ಎಂದು ಟೀಕಿಸಿದರು.

 8 ಲಕ್ಷ ಕೋಟಿಯಷ್ಟು ಸಾಲ ಶ್ರೀಮಂತ ವ್ಯಕ್ತಿಗಳಿಂದ ವಸೂಲಾಗಬೇಕಿದೆ. ರೈತರು ಸಾಲ ಕಟ್ಟದಿದ್ದರೆ ಅವರ ಮನೆ, ಭೂಮಿ ಕಿತ್ತುಕೊಳ್ಳುವ ನೀವು, ಶ್ರೀಮಂತ ವ್ಯಕ್ತಿಗಳು ಸಾಲ ಕಟ್ಟಲು ವಿಫಲವಾದರೆ ಅವರನ್ನು ಸುಸ್ತಿದಾರರು ಎಂದು ಕರೆದು, ಅವರ ಸಾಲವನ್ನು ಅನುತ್ಪಾದಕ ಆಸ್ತಿ(ನಾನ್ ಪರ್ಫಾರ್ಮಿಂಗ್ ಅಸೆಟ್) ಖಾತೆಗೆ ವರ್ಗಾಯಿಸಿ ಬಿಡುತ್ತೀರಿ.ಅವರ ಸಾಲವನ್ನು ವಸೂಲು ಮಾಡುವ ಬದಲು ಅದನ್ನು ನವೀಕರಿಸುತ್ತೀರಿ ಎಂದು ಕೇಂದ್ರ ಸರಕಾರವನ್ನು ಟೀಕಿಸಿದರು.

   ಇದೀಗ ಬಡವರ ಹಣವನ್ನು ಸುದೀರ್ಘ ಕಾಲ ಬ್ಯಾಂಕ್‌ನಲ್ಲಿ ಠೇವಣಿ ಇರಿಸುವಂತೆ ಬಲವಂತಮಾಡಿ, ಅದನ್ನು ಶ್ರೀಮಂತ ಕುಳಗಳಿಗೆ ಹಂಚುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬಡವರಿಂದ ಪಡೆದ ಹಣದಿಂದ ಶ್ರೀಮಂತರ 8 ಕೋಟಿ ಸಾಲ ಮನ್ನಾ ಮಾಡಲು ಸರಕಾರ ಉದೆ್ದೀಶಿಸಿದೆ ಎಂದು ರಾಹುಲ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News