ನೋಟು ರದ್ದತಿ ವಿರುದ್ಧ ಹರಿಹಾಯ್ದ ಫೋರ್ಬ್ಸ್ ಹೇಳಿದ್ದನ್ನು ಪ್ರಧಾನಿ ಮೋದಿ ಜೀರ್ಣಿಸಿಕೊಳ್ಳಲು ಸಾಧ್ಯವೇ ?
ವಾಶಿಂಗ್ಟನ್, ಡಿ. 23: ಭಾರತ ಸರಕಾರದ ಕರೆನ್ಸಿ ನೋಟು ಅಮಾನ್ಯ ಕ್ರಮವನ್ನು ‘ಫೋರ್ಬ್ಸ್ ಮ್ಯಾಗಝಿನ್’ನ ಮುಖ್ಯ ಸಂಪಾದಕ ಸ್ಟೀವ್ ಫೋರ್ಬ್ಸ್ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ. ‘‘ಅವರು ಮಾಡಿರುವುದು ಅಸಹ್ಯಕರ ಮತ್ತು ಅನೈತಿಕ’’ ಎಂಬುದಾಗಿ ಅವರು ಬಣ್ಣಿಸಿದ್ದಾರೆ.
ಪತ್ರಿಕೆಯಲ್ಲಿ ಈ ಕುರಿತು ಲೇಖನವೊಂದನ್ನು ಬರೆದಿರುವ ಫೋರ್ಬ್ಸ್, ಸರಕಾರದ ಕ್ರಮವು ಜನರ ಸಂಪತ್ತಿನ ಬೃಹತ್ ದರೋಡೆಯಾಗಿದೆ ಎಂದಿದ್ದಾರೆ.
ಭಾರತೀಯ ಅಧಿಕಾರಶಾಹಿಯು ಭ್ರಷ್ಟಾಚಾರ, ಕೆಂಪು ಪಟ್ಟಿ ಮತ್ತು ಜಡತೆಗೆ ಕುಖ್ಯಾತವಾಗಿದೆ ಎಂದು ಅವರು ತನ್ನ ಲೇಖನದಲ್ಲಿ ಹೇಳಿದ್ದಾರೆ.
ಭಾರತ ಸರಕಾರ ನೋಟು ಅಮಾನ್ಯವನ್ನು ಹೇಗೆ ಮಾಡಿತು ಎಂಬ ಬಗ್ಗೆ, ನಗದು ಹಣದ ಕೊರತೆಯ ಬಗ್ಗೆ, ಎಟಿಎಮ್‌ಗಳಲ್ಲಿ ಉದ್ದದ ಸರದಿ ಸಾಲುಗಳ ಬಗ್ಗೆ, ಹಾಗೂ ಜನರ ಬದುಕುಗಳ ಮೇಲೆ ಹೆಚ್ಚಿದ ಸರಕಾರಿ ನಿಯಂತ್ರಣಗಳ ಬಗ್ಗೆ ಅವರು ಬರೆದಿದ್ದಾರೆ.
ಒಂದು ಹಂತದಲ್ಲಿ ಲೇಖಕರು ಹಣ ಅಮಾನ್ಯ ಕ್ರಮವನ್ನು 1970ರ ದಶಕದಲ್ಲಿ ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದ ಕುಖ್ಯಾತ ಬಲವಂತದ ಸಂತಾನಹರಣ ಕಾರ್ಯಕ್ರಮಕ್ಕೆ ಹೋಲಿಸಿದರು. ಇದು ನಾಝಿ ಮಾದರಿಯ ತುರ್ತು ಪರಿಸ್ಥಿತಿಯಾಗಿದೆ ಎಂದು ಬಣ್ಣಿಸಿದರು.
ಹಣ ಅಮಾನ್ಯ ಕ್ರಮವನ್ನು ಸಮರ್ಥಿಸಲು ಸರಕಾರ ಬಳಸುತ್ತಿರುವ ಎಲ್ಲ ವಿವರಣೆಗಳನ್ನೂ ಫೋರ್ಬ್ಸ್ ಟೀಕಿಸಿದ್ದಾರೆ.
ಭಾರತ ಸರಕಾರದ ಅತಿರೇಕದ ನಿಯಮಗಳು ಮತ್ತು ತೆರಿಗೆಗಳನ್ನು ಖಂಡಿಸಿರುವ ಫೋರ್ಬ್ಸ್, ನಗದು ಆಧರಿತ ವ್ಯವಹಾರ ಹೆಚ್ಚಾಗಲು ಇದೇ ಕಾರಣ ಎಂದು ಹೇಳಿದ್ದಾರೆ.
ನೋಟು ಅಮಾನ್ಯದಿಂದ ಭಯೋತ್ಪಾದನೆಗೆ ಪೆಟ್ಟು ಬಿದ್ದಿದೆ ಎಂಬ ಅಭಿಪ್ರಾಯದ ಬಗ್ಗೆ ಮಾತನಾಡಿದ ಅವರು, ಕರೆನ್ಸಿ ನೋಟುಗಳ ಬದಲಾವಣೆ ಮೂಲಕ ಭಯೋತ್ಪಾದಕರು ತಮ್ಮ ದುಷ್ಕೃತ್ಯಗಳನ್ನು ನಡೆಸದಂತೆ ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ನೋಟು ಅಮಾನ್ಯ ಕ್ರಮಗಳಿಂದ ಜನರ ವೈಯಕ್ತಿಕ ಬದುಕುಗಳ ಮೇಲೆ ಹೆಚ್ಚಿನ ನಿಯಂತ್ರಣಗಳನ್ನಷ್ಟೇ ಸರಕಾರ ಗಳಿಸಲು ಸಾಧ್ಯ ಎಂದು ಫೋರ್ಬ್ಸ್ ನುಡಿದರು.
‘‘ಇದು ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆಯಾದ ಸರಕಾರವೊಂದು ಜನರಿಗೆ ನೀಡಿದ ಆಘಾತವಾಗಿದೆ’’ ಎಂದರು.