ಕ್ರಿಸ್‌ಮಸ್ ಟ್ರೀ, ಸಾಂತಾಕ್ಲಾಸ್ ಉಡುಗೆ ನಿಷೇಧಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಕಾರ
ಹೊಸದಿಲ್ಲಿ, ಡಿ.23: ಕ್ರಿಸ್‌ಮಸ್ ಟ್ರೀ ಬಳಕೆ ಮತ್ತು ಸಾಂತಾಕ್ಲಾಸ್ ಉಡುಗೆಗಳನ್ನು ತಯಾರಿಸುವುದನ್ನು ನಿಷೇಧಿಸಬೇಕು ಎಂಬ ಮನವಿಯನ್ನು ತಿರಸ್ಕರಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ , ಪರಿಸರ ಮಾಲಿನ್ಯದ ನೆಪದಲ್ಲಿ ಕೋಮುವಾರು ವಿಷಯಗಳನ್ನು ಪ್ರಸ್ತಾವಿಸಬಾರದು ಎಂದು ತಿಳಿಸಿದೆ.
ಅದಾಗ್ಯೂ, ಹಬ್ಬದ ಸಂಭ್ರಮಾಚರಣೆ ಸಂದರ್ಭ ಪರಿಸರ ಕಾನೂನಿನ ಉಲ್ಲಂಘನೆಯಾಗದಂತೆ ಮತ್ತು ಪರಿಸರ ಮಾಲಿನ್ಯವಾಗದಂತೆ ಖಾತರಿಪಡಿಸುವಂತೆ ದಿಲ್ಲಿ ಸರಕಾರಕ್ಕೆ ತಿಳಿಸಿದೆ. ಜಾತಿ, ಮತ ಅಥವಾ ಧರ್ಮದ ಚೌಕಟ್ಟು ಮೀರಿ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಪರಿಸರ ಸಂರಕ್ಷಣೆ ಹೆಸರಲ್ಲಿ ಕೋಮುವಾರು ವಿಷಯಗಳನ್ನು ಪ್ರಸ್ತಾವಿಸಬಾರದು ಎಂಬ ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಮೂರ್ತಿ ಯು.ಡಿ. ಸಾಲ್ವಿ ನೇತೃತ್ವದ ಪೀಠವೊಂದು ತಿಳಿಸಿದೆ.
ಕ್ರಿಸ್‌ಮಸ್ ಟ್ರೀ ತಯಾರಿಸುವ ವೇಳೆ ಪ್ಲಾಸ್ಟಿಕ್ ಉಪಯೋಗಿಸಲಾಗುತ್ತದೆ . ಇದು ಪರಿಸರಕ್ಕೆ ಹಾನಿಕಾರಕ. ಅದೇ ರೀತಿ ಸಾಂತಾಕ್ಲಾಸ್ ಉಡುಗೆ ತಯಾರಿಸುವ ಸಂದರ್ಭ ಹತ್ತಿ ಮತ್ತು ಉಣ್ಣೆಯನ್ನು ವ್ಯರ್ಥಗೊಳಿಸಲಾಗುತ್ತಿದ್ದು ಇದನ್ನು ನಿಷೇಧಿಸಬೇಕೆಂದು ದಿಲ್ಲಿ ಸರಕಾರಕ್ಕೆ ಸೂಚಿಸುವಂತೆ ಕೋರಿ ‘ಓಜಸ್ವಿ ಪಕ’್ಷ ಎಂಬ ಧಾರ್ಮಿಕ ಸಂಘಟನೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಹೊಸ ವರ್ಷಾಚರಣೆಯ ಸಂದರ್ಭ ಪಟಾಕಿ ಸಿಡಿಸುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಮತ್ತು ರಾತ್ರಿ 10 ಗಂಟೆಯ ಬಳಿಕ ಲೌಡ್‌ಸ್ಪೀಕರ್ ಬಳಕೆ ನಿಷೇಧಿಸಬೇಕೆಂದೂ ಮನವಿಯಲ್ಲಿ ತಿಳಿಸಲಾಗಿತ್ತು.