ಬರದ ಬಾಯಲ್ಲಿ ಉತ್ತರ ಕರ್ನಾಟಕ
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರ ಬಿದ್ದಿದೆ. ಈ ಹಿಂದೆ ಬಂದಿದ್ದ ಕೇಂದ್ರ ತಂಡದಿಂದ ಬರ ಅಧ್ಯಯನ ನಡೆದಿದ್ದೂ ಅಷ್ಟರಲ್ಲೇ ಇದೆ. ಕೇಂದ್ರದಿಂದ ಯಾವುದೇ ಪರಿಹಾರ ಕೂಡ ದೊರೆಯುವುದು ಒತ್ತಟ್ಟಿಗಿರಲಿ, ಒಂದಿಷ್ಟು ಸಾಂತ್ವನದ ಮಾತುಗಳೂ ಉತ್ತರ ಕರ್ನಾಟಕದ ಜನರಿಗೆ ಸಿಗಲಿಲ್ಲ. ಇನ್ನು ಬರ ಪರಿಹಾರ ಎಲ್ಲಿಯದು. ಈಗ ರಾಜ್ಯದ ತಂಡ ಬರುತ್ತಿದೆ ಎನ್ನುತ್ತಿದ್ದಾರೆ. ಇದು ಕೂಡ ಉಳ್ಳವರ ಕೇವಲ ಕಾಟಾಚಾರ ಹಾಗೂ ಪ್ರಚಾರಕ್ಕೆ ಮಾತ್ರ ಸೀಮಿತವಾಗಲಿದೆ. ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪರಿಸ್ಥಿತಿ ಅವಲೋಕಿಸಿದ್ದಾರೆ. ಮುಖ್ಯಮಂತ್ರಿಗಳಾದರೂ ಬಂದರು, ಪರಿಹಾರ ಸಿಗುತ್ತದೆ ಎಂದೇ ಜನ ನಂಬಿದ್ದರು. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಿಗಾಗಲಿ, ಉತ್ತರ ಕರ್ನಾಟಕ ಜಿಲ್ಲೆಗಳ ರೈತರಿಗಾಗಲಿ ಯಾವುದೇ ರೀತಿಯ ಪರಿಹಾರ ಇಲ್ಲಿಯವರೆಗೆ ಬಂದಿಲ್ಲ. ಸಿಗುವ ಭರವಸೆ ಕೂಡ ಈಗ ಹುಸಿಯಾಗಿದೆ. ಇದೀಗ ಉತ್ತರ ಕರ್ನಾಟಕ ಜಿಲ್ಲೆಗಳಗೆ ಸಚಿವ ಸಂಪುಟದ ಉಪಸಮಿತಿಯ ಸಚಿವರ ತಂಡವು ಇದೇ 15ರಂದು ಬರ ಅಧ್ಯಯನ ನಡೆಸಿತು. ಅದು ಕೂಡಾ ಹುಸಿ ಪ್ರಹಸನದಂತೆ ಕಂಡಿದೆ. ಈ ಹಿನ್ನೆಲೆಯಲ್ಲಿ ಇದು ಕೂಡ ಈ ಹಿಂದಿನ ಕಾಟಾಚಾರದ ಭೇಟಿಯ ಪಟ್ಟಿಗೆ ಸೇರುತ್ತಿದೆ. ರೈತರ ವಸ್ತುಸ್ಥಿತಿ ಅರಿತುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರ ಪ್ರತೀ ಎಕರೆಗೆ ರೂ.25 ಸಾವಿರ ಬೆಳೆ ಪರಿಹಾರ ಬಿಡುಗಡೆಗೊಳಿಸಬೇಕು. ಅಲ್ಲದೆ, ಬೆಳೆ ವಿಮೆ ಪರಿಹಾರದ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಈ ಬೇಡಿಕೆಗಳಲ್ಲಿ ಒಂದಿಷ್ಟಾದರೂ ಸಿಕ್ಕರೆ, ಅದರಿಂದ ಒಂದಿಷ್ಟು ಚೇತರಿಸಿಕೊಳ್ಳಬಹುದೇನೋ ಉತ್ತರ ಕರ್ನಾಟಕದ ರೈತರು. ಮೇವಿನ ಕೊರತೆಯಿರುವ ಕಡೆ ಮೇವು, ಹೊಟ್ಟು ವಿತರಣೆ ಮಾಡಬೇಕು. ಅಗತ್ಯವಿರುವ ಕಡೆ ಗೋಶಾಲೆ ಹಾಗೂ ಮೇವಿನ ಕೇಂದ್ರಗಳನ್ನು ಆರಂಭಿಸಬೇಕು. ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಜಿಲ್ಲಾಡಳಿತದಿಂದ ಮಾಡಬೇಕಾಗುತ್ತದೆ. ಆದರೆ, ಅವು ಅವರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬರ ಪರಿಹಾರ ಕಾಮಗಾರಿಗಳಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ವಿಶೇಷ ಅನುದಾನ ಬಿಡುಗಡೆಗೊಳಿಸುವುದು ಅನಿವಾರ್ಯವಾಗಿದೆ ಈಗ. ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಎಲ್ಲರಿಗೂ ಸಮರ್ಪಕ ಕೂಲಿ ಕೆಲಸ ಸಿಗುತ್ತಿಲ್ಲ. ಅಲ್ಲದೆ ದುಡಿದವರಿಗೆ ತಿಂಗಳಿಗೆ ಸರಿಯಾಗಿ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಅನೇಕ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಆದರೆ, ನೋಟು ರದ್ದತಿ ನಂತರ ಸಮರ್ಪಕವಾಗಿ ಎಲ್ಲಡೆ ಹೊಸ ನೋಟುಗಳು ಸಿಗದ ಹಿನ್ನೆಲೆಯಲ್ಲಿ ಎಲ್ಲರಿಗೂ ಕೆಲಸಗಳು ಸಿಗುತ್ತಿಲ್ಲ.
ಉತ್ತರ ಕರ್ನಾಟಕದ ಜನರಿಗೆ ಸರಕಾರಗಳು ಸಾಂತ್ವನದ ನುಡಿಗಳನ್ನಾಡುವುದನ್ನು ಬಿಟ್ಟು ಒಂದಿಷ್ಟು ಕ್ರಿಯಾತ್ಮಕವಾಗಿ ಸ್ಪಂದಿಸಲಿ.
ಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರ ಪರಿಸ್ಥಿತಿ ಅವಲೋಕಿಸಿದ್ದಾರೆ. ಮುಖ್ಯಮಂತ್ರಿಗಳಾದರೂ ಬಂದರು, ಪರಿಹಾರ ಸಿಗುತ್ತದೆ ಎಂದೇ ಜನ ನಂಬಿದ್ದರು. ಆದರೆ, ಉತ್ತರ ಕರ್ನಾಟಕದ ಜಿಲ್ಲೆಗಳಿಗಾಗಲಿ, ಉತ್ತರ ಕರ್ನಾಟಕ ಜಿಲ್ಲೆಗಳ ರೈತರಿಗಾಗಲಿ ಯಾವುದೇ ರೀತಿಯ ಪರಿಹಾರ ಇಲ್ಲಿಯವರೆಗೆ ಬಂದಿಲ್ಲ.