×
Ad

ಕ್ರಿಸ್ಟ್ ದಾಳಿಗೆ ಕರ್ನಾಟಕ ಕಂಗಾಲು *ಒಂದೇ ದಿನ ಉರುಳಿತು 14 ವಿಕೆಟ್

Update: 2016-12-23 23:53 IST

ವಿಶಾಖಪಟ್ಟಣ, ಡಿ.23: ತಮಿಳುನಾಡಿನ ಅಶ್ವಿನ್ ಕ್ರಿಸ್ಟ್ ದಾಳಿಗೆ ಸಿಲುಕಿದ ಕರ್ನಾಟಕ ತಂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನ ಮೊದಲ ಇನಿಂಗ್ಸ್‌ನ್ನು ಬೇಗನೆ ಮುಗಿಸಿದ್ದು, ಮೊದಲ ಇನಿಂಗ್ಸ್‌ನಲ್ಲಿ 37.1 ಓವರ್‌ಗಳಲ್ಲಿ 88 ರನ್‌ಗಳಿಗೆ ಆಲೌಟಾಗಿದೆ.

  ಡಾ.ವೈಎಸ್ ರಾಜಶೇಖರ ರೆಡ್ಡಿ ಎಸಿಎ ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಕೇವಲ 186 ನಿಮಿಷಗಳಲ್ಲಿ ಕರ್ನಾಟಕದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿದೆ.
 ಇಂಗ್ಲೆಂಡ್ ವಿರುದ್ಧದ ಐದನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ತ್ರಿಶತಕ ದಾಖಲಿಸಿದ್ದ ಕರುಣ್ ನಾಯರ್ ಮತ್ತು 1 ರನ್‌ನಿಂದ ದ್ವಿಶತಕ ವಂಚಿತಗೊಂಡಿದ್ದ ಲೋಕೇಶ್ ರಾಹುಲ್ (4)ಅವರ ಬ್ಯಾಟಿಂಗ್ ನಡೆಯಲಿಲ್ಲ. ನಾಯರ್ 14 ರನ್ ಗಳಿಸಿ ಕ್ರಿಸ್ಟ್‌ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಅವರು ನಟರಾಜನ್ ಎಸೆತದಲ್ಲಿ ಅಪರಾಜಿತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಕರ್ನಾಟಕದ ಪರ ಮನೀಷ್ ಪಾಂಡೆ 28 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ.
 ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ ತಂಡ 1.3ನೆ ಓವರ್‌ನಲ್ಲಿ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್ ವಿಕೆಟ್ ಕಳೆದುಕೊಂಡಿತು. ತಂಡದ ಸ್ಕೋರ್ 8.4 ಓವರ್‌ಗಳಲ್ಲಿ 10 ತಲುಪುವಾಗ ಇನ್ನೊಂದು ವಿಕೆಟ್ ಕಳೆದುಕೊಂಡಿತು. ಕೆ.ಅಬ್ಬಾಸ್(0) ಖಾತೆ ತೆರೆಯದೆ ನಿರ್ಗಮಿಸಿದರು. ಅಶ್ವಿನ್ ಕ್ರಿಸ್ಟ್ ಅವರು ಅಬ್ಬಾಸ್ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಪ್ರಹಾರ ಆರಂಭಿಸಿದರು.
 ಅಬ್ಬಾಸ್ 31 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿ 24 ಎಸೆತಗಳನ್ನು ಎದುರಿಸಿದರೂ ಖಾತೆ ತೆರೆಯಲಿಲ್ಲ. ಆರ್. ಸಮರ್ಥ್ 70 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿ 42 ಎಸೆತಗಳನ್ನು ಎದುರಿಸಿದರು. 2 ಸಿಕ್ಸರ್ ನೆರವಿನಿಂದ 11 ರನ್ ಗಳಿಸಿದರು.
ಅಭಿಮನ್ಯು ಮಿಥುನ್(6), ಮನೀಷ್ ಪಾಂಡೆ (28), ಸ್ಟುವರ್ಟ್ ಬಿನ್ನಿ(0), ಕರುಣ್ ನಾಯರ್(14), ಸಿಎಂ ಗೌತಮ್(2), ಆರ್ .ವಿನಯ್ ಕುಮಾರ್(14) ಇವರ ವಿಕೆಟ್‌ನ್ನು ಉಡಾಯಿಸುವ ಮೂಲಕ ಅಶ್ವಿನ್ ಕ್ರಿಸ್ಟ್ ಜೀವನಶ್ರೇಷ್ಠ ಪ್ರದರ್ಶನ ನೀಡಿದರು. ಎಸ್.ಗೋಪಾಲ್ (1) ವಿಕೆಟ್ ಉಡಾಯಿಸುವ ಮೂಲಕ ವ್ನಿೇಶ್ ಕರ್ನಾಟಕದ ಇನಿಂಗ್ಸ್ ಮುಗಿಸಿದರು.
ಅಶ್ವಿನ್ ಕ್ರಿಸ್ಟ್ 31ಕ್ಕೆ 6, ನಟರಾಜನ್ 18ಕ್ಕೆ 3 ಮತ್ತು ವ್ನಿೇಶ್ 32ಕ್ಕೆ 1 ವಿಕೆಟ್ ಪಡೆದರು.
ತಮಿಳುನಾಡು 111/4: ಕರ್ನಾಟಕವನ್ನು 88 ರನ್‌ಗಳಿಗೆ ನಿಯಂತ್ರಿಸಿದ ತಮಿಳುನಾಡು ತಂಡ ಮೊದಲ ಇನಿಂಗ್ಸ್ ಆರಂಭಿಸಿ ದಿನದಾಟದಂತ್ಯಕ್ಕೆ 36 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 111 ರನ್ ಗಳಿಸಿದ್ದು, 23 ರನ್‌ಗಳ ಮುನ್ನಡೆ ಸಾಧಿಸಿದೆ.
ತಮಿಳುನಾಡು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 31 ರನ್ ಮತ್ತು ನಾಯಕ್ ಅಭಿನವ್ ಮುಕುಂದ್ 3 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ದಿನೇಶ್ ಕಾರ್ತಿಕ್‌ಗೆ ಇದು 100ನೆ ರಣಜಿ ಪಂದ್ಯವಾಗಿದೆ. ಆರಂಭಿಕ ದಾಂಡಿಗರಾದ ಕೆ.ಎಂ.ಗಾಂಧಿ(15), ಸೂರ್ಯಪ್ರಕಾಶ್(15) ಅವರು ಎಸ್.ಅರವಿಂದ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ವಿ.ಶಂಕರ್ 34 ರನ್ ಗಳಿಸಿ ರನೌಟಾದರು.
  197/6: ಜೈಪುರದಲ್ಲಿ ಆರಂಭಗೊಂಡ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಒಡಿಶಾ ವಿರುದ್ಧ ಗುಜರಾತ್ 6 ವಿಕೆಟ್ ನಷ್ಟದಲ್ಲಿ 197 ರನ್ ಗಳಿಸಿದೆ. ಚಿರಾಗ್‌ಗಾಂಧಿ ಔಟಾಗದೆ 62 ರನ್, ರುಶ್ ಕಲಾರಿಯಾ ಔಟಾಗದೆ 59 ರನ್ ಗಳಿಸಿದ್ದಾರೆ.. ಒಡಿಶಾದ ದೀಪಕ್ ಬೇಹರ್ 36ಕ್ಕೆ 3 ವಿಕೆಟ್ ಪಡೆದರು.
ಮುಂಬೈ 250/5: ರಾಯ್ಪುರದಲ್ಲಿ ನಡೆಯುತ್ತಿರುವ ಹೈದರಾಬಾದ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ 90 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 250 ರನ್ ಗಳಿಸಿದೆ.ಸಿದ್ದೇಶ್ ಲಾಡ್ ಔಟಾಗದೆ 101 ಮತ್ತು ಅಭಿಷೇಕ್ ನಾಯರ್ 46 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಆದಿತ್ಯ ತಾರೆ 73 ರನ್ ಗಳಿಸಿ ಔಟಾಗಿದ್ದಾರೆ. ಚಮಾ ಮಿಲಾಂದ್ 46ಕ್ಕೆ 3 ವಿಕೆಟ್ ಪಡೆದಿದ್ದಾರೆ.

ನದೀಮ್ ದಾಳಿಗೆ ನಲುಗಿದ ಹರ್ಯಾಣ

ವಡೋದರ, ಡಿ.23: ಹರ್ಯಾಣದ ಬ್ಯಾಟ್ಸ್‌ಮನ್‌ಗಳ ಹೋರಾಟಕಾರಿ ಪ್ರದರ್ಶನದ ಹೊರತಾಗಿಯೂ ಜಾರ್ಖಂಡ್ ತಂಡ ಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ದಿನ ಬಿಗಿ ಹಿಡಿತ ಸಾಧಿಸಿದೆ.

ಶುಕ್ರವಾರ ಇಲ್ಲಿ ಆರಂಭವಾದ ನಾಲ್ಕನೆ ಕ್ವಾರ್ಟರ್ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಹರ್ಯಾಣ ತಂಡ ಜಾರ್ಖಂಡ್ ಸ್ಪಿನ್ನರ್ ಶಹಬಾಝ್ ನದೀಮ್(5-75) ದಾಳಿಗೆ ಸಿಲುಕಿ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲ ವಿಕೆಟ್‌ಗೆ 35 ರನ್ ಸೇರಿಸಿ ಉತ್ತಮ ಆರಂಭ ಪಡೆದಿದ್ದ ಹರ್ಯಾಣ ತಂಡ 25ನೆ ಓವರ್‌ನಲ್ಲಿ 71 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಆಗ ನಾಲ್ಕನೆ ವಿಕೆಟ್‌ಗೆ 83 ರನ್ ಸೇರಿಸಿದ ರಜತ್ ಪಾಲಿವಲ್(42) ಹಾಗೂ ಚೈತನ್ಯ ಬಿಶ್ನಾಯ್(41) ತಂಡಕ್ಕೆ ಆಸರೆಯಾದರು.

ಆಗ ದಾಳಿಗಿಳಿದ ನದೀಮ್ ಪಂದ್ಯದ ಚಿತ್ರಣ ಬದಲಿಸಿದರು. ನದೀಮ್ ಸ್ಪಿನ್ ಮೋಡಿಗೆ ತತ್ತರಿಸಿದ ಹರ್ಯಾಣ ತಂಡ ಒಂದು ಹಂತದಲ್ಲಿ 195 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತು.

8ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 56 ರನ್ ಜೊತೆಯಾಟ ನಡೆಸಿದ ಸಂಜಯ್ ಪಹಲ್(38) ಹಾಗೂ ಹರ್ಷಲ್ ಪಟೇಲ್(22) ಹರ್ಯಾಣ ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಲು ನೆರವಾದರು.

ಸಂಜಯ್-ಹರ್ಷಲ್ ಜೋಡಿ ಹರ್ಯಾಣವನ್ನು ಗೌರವಾರ್ಹ ಮೊತ್ತದತ್ತ ಕೊಂಡೊಯ್ದಿದ್ದಾರೆ. ಮತ್ತೊಂದೆಡೆ, ಜಾರ್ಖಂಡ್ ತಂಡ ಎರಡನೆ ದಿನವಾದ ಶನಿವಾರ ಬೌಲಿಂಗ್ ದಾಳಿಯನ್ನು ತೀವ್ರಗೊಳಿಸುವ ವಿಶ್ವಾಸದಲ್ಲಿದೆ.

ಸಂಕ್ಷಿಪ್ತ ಸ್ಕೋರ್

ಹರ್ಯಾಣ 251/7

(ರಜತ್ 42, ಚೈತನ್ಯ 41, ಸಂಜಯ್ ಪಟೇಲ್ ಅಜೇಯ 38, ಶಹಬಾಝ್ ನದೀಮ್ 5-75)

ಸ್ಕೋರ್ ವಿವರ

ಕರ್ನಾಟಕ ಪ್ರಥಮ ಇನಿಂಗ್ಸ್: 37.1 ಓವರ್‌ಗಳಲ್ಲಿ 88 ರನ್‌ಗೆ ಆಲೌಟ್

ಆರ್.ಸಮರ್ಥ್ ಸಿ ಗಾಂಧಿ ಬಿ ನಟರಾಜನ್ 11

ಕೆಎಲ್ ರಾಹುಲ್ ಸಿ ಅಪರಾಜಿತ್ ಬಿ ನಟರಾಜನ್ 04

ಕೆ.ಅಬ್ಬಾಸ್ ಸಿ ಶಂಕರ್ ಬಿ ಅಶ್ವಿನ್ ಕ್ರಿಸ್ಟ್ 00

ಮನೀಷ್ ಪಾಂಡೆ ಸಿ ಗಾಂಧಿ ಬಿ ಅಶ್ವಿನ್ ಕ್ರಿಸ್ಟ್ 28

ಮಿಥುನ್ ಸಿ ಕಾರ್ತಿಕ್ ಬಿ ನಟರಾಜನ್ 06

ಕರುಣ್ ನಾಯರ್ ಸಿ ಕಾರ್ತಿಕ್ ಬಿ ಕ್ರಿಸ್ಟ್ 14

ಸ್ಟುವರ್ಟ್ ಬಿನ್ನಿ ಎಲ್‌ಬಿಡಬ್ಲು ಅಶ್ವಿನ್ ಕ್ರಿಸ್ಟ್ 00

ಗೌತಮ್ ಸಿ ಇಂದ್ರಜಿತ್ ಬಿ ಅಶ್ವಿನ್ ಕ್ರಿಸ್ಟ್ 02

ವಿನಯಕುಮಾರ್ ಸಿ ನಟರಾಜನ್ ಬಿ ಕ್ರಿಸ್ಟ್ 14

ಎಸ್.ಗೋಪಾಲ್ ಸಿ ಕಾರ್ತಿಕ್ ಬಿ ವ್ನಿೇಶ್ 01

ಎಸ್.ಅರವಿಂದ್ ಅಜೇಯ 01

ಇತರ 07

ವಿಕೆಟ್ ಪತನ: 1-4, 2-10, 3-31, 4-44, 5-61, 6-61, 7-72, 8-77, 9-82, 10-88.

ಬೌಲಿಂಗ್ ವಿವರ:

ಅಶ್ವಿನ್ ಕ್ರಿಸ್ಟ್ 13.1-5-31-6

ನಟರಾಜನ್ 9-3-18-3

ವ್ನಿೇಶ್ 11-3-32-1

ಶಂಕರ್ 4-1-3-0

ತಮಿಳುನಾಡು ಪ್ರಥಮ ಇನಿಂಗ್ಸ್:

36 ಓವರ್‌ಗಳಲ್ಲಿ 111/4

ಕೆಎಂ ಗಾಂಧಿ ಸಿ ರಾಹುಲ್ ಬಿ ಅರವಿಂದ್ 15

ಸೂರ್ಯಪ್ರಕಾಶ್ ಸಿ ಗೌತಮ್ ಬಿ ಅರವಿಂದ್ 15

ಇಂದ್ರಜಿತ್ ಸಿ ಗೌತಮ್ ಬಿ ಬಿನ್ನಿ 01

ಕಾರ್ತಿಕ್ ಅಜೇಯ 31

ಶಂಕರ್ ರನೌಟ್ 34

ಮುಕುಂದ್ ಅಜೇಯ 03

ಇತರ 12

ವಿಕೆಟ್ ಪತನ: 1-30, 2-31, 3-33, 4-103

ಬೌಲಿಂಗ್ ವಿವರ:

ವಿನಯಕುಮಾರ್ 10-3-33-0

ಮಿಥುನ್ 07-0-34-0

ಎಸ್.ಅರವಿಂದ್ 11-5-14-2

ಬಿನ್ನಿ 08-3-18-1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News