ಸಚಿವ ಖಾದರ್ ಪುತ್ರಿ ಹವ್ವಾಗೆ ಹಾಫಿಝಾ ಪದವಿ

Update: 2016-12-24 05:10 GMT

ಮಂಗಳೂರು, ಡಿ.24: ಸಣ್ಣ ಪ್ರಾಯದಲ್ಲೇ ಕುರ್‌ಆನ್ ಗ್ರಂಥವನ್ನು ಸಂಪೂರ್ಣವಾಗಿ ಕಂಠಪಾಠ ಮಾಡುವ ಮೂಲಕ ‘ಹಾಫಿಝಾ’ ಪದವಿಯನ್ನು ಸಿದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಾಲ ಸಾಧಕಿಯಾಗಿದ್ದಾರೆ ಹವ್ವಾ ನಸೀಮಾ.

11ರ ಹರೆಯದಲ್ಲೇ ಈ ಸಾಧನೆಗೈದ ಈ ಪುಟ್ಟ ಬಾಲಕಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಸಚಿವ ಯು.ಟಿ.ಖಾದರ್ ಅವರ ಏಕೈಕ ಪುತ್ರಿ. ಸತತ ಮೂರೂವರೆ ವರ್ಷಗಳ ಕಲಿಕೆಯ ಮೂಲಕ ಹಾಫಿಝಾ ಆಗಿದ್ದಾಳೆ ಹವ್ವಾ ನಸೀಮಾ.

ಕಾಸರಗೋಡು ಅಡ್ಕರಬೈಲ್ ಮದ್ರಸತ್ತುಲ್ ಬಯಾನ್‌ನಲ್ಲಿ ಎರಡು ವರ್ಷಗಳ ಅಧ್ಯಯನದ ಬಳಿಕ ಇದೀಗ ಒಂದೂವರೆ ವರ್ಷದಿಂದ ಕೊಣಾಜೆ ಬಳಿಯ ತನ್ ಫೀಝುಲ್ ಕುರ್‌ಆನ್ ಮಹಿಳಾ ಕಾಲೇಜಿನಲ್ಲಿ ಕುರ್‌ಆನ್ ಅಧ್ಯಯನ ಮಾಡುತ್ತಿದ್ದಾಳೆ. ತಿರುವನಂತಪುರದ ಹಾಫಿಝ್ ಮುಹಮ್ಮದ್ ಝಿಯಾದ್ ನದ್ವಿ ನೇತೃತ್ವದಲ್ಲಿ ಸಂಸ್ಥೆಯಲ್ಲಿ ಅಲ್ ಹಾಫಿಝಾ ಸುಮಯ್ಯೆ ಈಕೆಯ ಧಾರ್ಮಿಕ ಶಿಕ್ಷಕಿ.

ಈಕೆಯೊಂದಿಗೆ ಇತರ 10 ಮಂದಿ ಸಂಪೂರ್ಣ ಕುರ್‌ಆನ್ ಕಂಠಪಾಠ ಮಾಡಿದ್ದಾರೆ. ಇವರೆಲ್ಲರಿಗೂ ಡಿ.24ರಂದು ಮಂಗಳೂರಿನ ಡಾ.ಟಿಎಂಎ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯುವ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಗುತ್ತದೆ.

ಸರಳ ಜೀವನ:
ಮನೆಯಲ್ಲಿ ಶ್ರೀಮಂತಿಕೆ ಇದ್ದರೂ ಕಾಸರಗೋಡಿನ ಹಾಸ್ಟೆಲ್‌ನಲ್ಲಿ ಬಡ ಅನಾಥ ಮಕ್ಕಳೊಂದಿಗೆ ಸರಳ ಜೀವನದ ಮೂಲಕ ಶಿಕ್ಷಣ ಪಡೆದಿರುವ ಹವ್ವಾ ನಸೀಮಾ, ಸದ್ಯ ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲೂ ಬಡ, ಮಧ್ಯಮ ವರ್ಗದ 60 ಮಕ್ಕಳು ಇದ್ದಾರೆ. ಇಲ್ಲೂ ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಮೂಲಕ ಸರಳತೆಯನ್ನು ಮೈಗೂಡಿಸಿಕೊಂಡಿದ್ದಾರೆ ಹವ್ವಾ ನಸೀಮಾ.

ಪವಿತ್ರ ಕುರ್‌ಆನ್ 114 ಅಧ್ಯಾಯ, 6,236 ವಾಕ್ಯ ಸೇರಿದಂತೆ ಸುಮಾರು 600ಕ್ಕೂ ಅಧಿಕ ಪುಟಗಳ ಬೃಹತ್ ಗ್ರಂಥ. ಇದನ್ನು ಎಷ್ಟೋ ಮಂದಿ ಕಂಠಪಾಠ ಮಾಡಿದವರಿದ್ದಾರೆ. ಇತ್ತೀಚೆಗೆ ಹೆಣ್ಣುಮಕ್ಕಳು ಉನ್ನತ ಧಾರ್ಮಿಕ ಶಿಕ್ಷಣದ ಮೂಲಕ ಕುರ್‌ಆನ್ ಕಂಠಪಾಠ ಮಾಡುತ್ತಿದ್ದಾರೆ. ಕುರ್‌ಆನ್ ಕಂಠಪಾಠ ಮಾಡುವುದನ್ನು ಹಿಫ್ಝ್ ಎನ್ನಲಾಗುತ್ತದೆ. ಕಂಠಪಾಠ ಮಾಡಿದವರು ಪುರುಷನಾದರೆ ‘ಹಾಫಿಝ್’ ಎಂದೂ ಮಹಿಳೆಯಾದರೆ ‘ಹಾಫಿಝಾ’ ಎಂದು ಕರೆಯಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News