×
Ad

ಬ್ಯಾಂಕ್‌ನೆದುರು ಕ್ಯೂ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

Update: 2016-12-24 19:52 IST

ಮಥುರ, ಡಿ.24: ತನ್ನ ಮಗನ ವೈದ್ಯಕೀಯ ಚಿಕಿತ್ಸೆಗೆ ಅಗತ್ಯವಿದ್ದ ಹಣ ಪಡೆಯಲು ಬ್ಯಾಂಕ್ ಎದುರು ಸರದಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಥುರಾದಲ್ಲಿ ನಡೆದಿದೆ.

 ಗೋವರ್ಧನ ನಗರದ ದುರ್ಗಾ ಕಾಲೊನಿ ನಿವಾಸಿ ಉಮಾ ಶಂಕರ್ ಮೃತಪಟ್ಟವರು. ಅಸೌಖ್ಯದಿಂದ ಬಳಲುತ್ತಿರುವ ತನ್ನ ಮಗನ ಚಿಕಿತ್ಸೆಗೆ ಹಣದ ಅಗತ್ಯವಿದ್ದ ಕಾರಣ ಬ್ಯಾಂಕಿನಿಂದ ಹಣ ಪಡೆಯಲು ಕಳೆದ ನಾಲ್ಕು ದಿನದಿಂದ ಪ್ರಯತ್ನಿಸಿದ್ದರು. ಇಂದು ಸೆಂಟ್ರಲ್ ಬ್ಯಾಂಕ್‌ನ ಸ್ಥಳೀಯ ಶಾಖೆಯ ಎದುರು ಸರದಿ ಸಾಲಿನಲ್ಲಿ ನಿಂತಿದ್ದ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಕುಸಿದು ಬಿದ್ದು ಮೃತಪಟ್ಟರು. ಹೃದಯಾಘಾತದಿಂದ ಇವರು ಮೃತಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಸ್ಥಳೀಯ ಆರ್‌ಎಲ್‌ಡಿ ಮುಖಂಡ ಕನ್ವರ್ ನರೇಂದ್ರ ಸಿಂಗ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಉಮಾಶಂಕರ್ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬ್ಯಾಂಕ್ ಸಿಬ್ಬಂದಿಗಳ ವಿರುದ್ದದ ದೂರಿನ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಉಮಾಶಂಕರ್ ಕುಟುಂಬಕ್ಕೆ ಗರಿಷ್ಠ ಸಹಾಯ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News