×
Ad

ಶಿವಾಜಿ ಸ್ಮಾರಕ ಸಮಾರಂಭ ಬಿಜೆಪಿಯಿಂದ ಹೈಜಾಕ್: ಶಿವಸೇನೆ ಟೀಕೆ

Update: 2016-12-24 23:49 IST

 ಮುಂಬೈ, ಡಿ.24: ರಾಜಕೀಯ ಲಾಭ ಗಳಿಸುವ ಉದ್ದೇಶದಿಂದ ಛತ್ರಪತಿ ಶಿವಾಜಿ ಸ್ಮಾರಕದ ಜಲಪೂಜಾ ಕಾರ್ಯಕ್ರಮವನ್ನು ಬಿಜೆಪಿ ಹೈಜಾಕ್ ಮಾಡಿದೆ ಎಂದು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ದೂರಿದೆ. ಈ ಸ್ಮಾರಕವು ಮಹಾರಾಷ್ಟ್ರದ ಪ್ರತಿಯೊಬ್ಬ ನಾಗರಿಕನ ಕನಸು ಎಂಬುದನ್ನು ಬಿಜೆಪಿ ಮರೆಯಬಾರದು. ಕಾಂಗ್ರೆಸ್-ಎನ್‌ಸಿಪಿ ನೇತೃತ್ವದ ಈ ಹಿಂದಿನ ಸರಕಾರವು ಸ್ಮಾರಕ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿತ್ತು, ಆದರೆ ಯಾಕೆ ಯಶಸ್ವಿಯಾಗಿಲ್ಲ ಎಂದು ಅವರಿಗೇ ಗೊತ್ತಿರಬೇಕು ಎಂದು ಶಿವಸೇನೆಯ ವಕ್ತಾರೆ ಮನೀಷಾ ಕಾಯಂದೆ ಹೇಳಿದ್ದಾರೆ.

   ತಾನು ಅಧಿಕಾರದಲ್ಲಿದ್ದಾಗಲೆಲ್ಲಾ ಕಾರ್ಯಕ್ರಮಗಳನ್ನು ಹೈಜಾಕ್ ಮಾಡುವ ಬಿಜೆಪಿಯ ಧೋರಣೆ ಕೆಟ್ಟ ಸಂಪ್ರದಾಯವಾಗಿದ್ದು, ಇದನ್ನು ಜನತೆ ಮೆಚ್ಚಲಾರರು ಎಂದ ಅವರು, ಇಲ್ಲಿ ನಡೆದ ರಾಮಮಂದಿರ ರೈಲ್ವೆ ಸ್ಟೇಷನ್‌ನ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿಯ ಕಾರ್ಯಕರ್ತರು ಪ್ರಧಾನಿಯನ್ನು ಬೆಂಬಲಿಸಿ ಘೋಷಣೆ ಕೂಗುವ ಮೂಲಕ ಇದೇ ರೀತಿಯ ಬೂಟಾಟಿಕೆಯ ವರ್ತನೆಯನ್ನು ತೋರಿದ್ದಾರೆ ಎಂದರು.
 ಚುನಾವಣೆಗೂ ಮೊದಲು ಬಿಜೆಪಿಯವರು ಅಯೋಧ್ಯೆ ಯಲ್ಲಿ ರಾಮಮಂದಿರ ನಿರ್ಮಿಸುವುದಾಗಿ ಜನರಲ್ಲಿ ಭಾರೀ ಕನಸನ್ನು ಬಿತ್ತಿದ್ದರು. ಇದೀಗ ಲೋಕಸಭೆಯಲ್ಲಿ ಅವರಿಗೆ ಬಹುಮತವಿದ್ದರೂ ತಮ್ಮ ಮಾತನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಅವರು ತಮ್ಮ ವೈಫಲ್ಯ ಒಪ್ಪಿಕೊಳ್ಳಬೇಕು ಎಂದು ಮನೀಷಾ ಹೇಳಿದ್ದಾರೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News