ಇನ್ನೊಂದು ಮಸೀದಿ ಮುಸ್ಲಿಮರಿಗೆ ವಾಪಸ್
ಲುಧಿಯಾನಾ,ಡಿ.24: ಕಳೆದ 72 ವರ್ಷಗಳಿಂದ ಅತಿಕ್ರಮಣಗೊಂಡಿದ್ದ ಫಗ್ವಾರಾ ಪಟ್ಟಣದ ಸರಾಯ್ ರಸ್ತೆ ಚೌಕದಲ್ಲಿನ ಮಸೀದಿಯೊಂದನ್ನು ಮುಸ್ಲಿಮರಿಗೆ ಮರಳಿಸಲಾಗಿದ್ದು, ಡಿ.14ರಿಂದ ನಿಯಮಿತವಾಗಿ ಪ್ರಾರ್ಥನೆಗಳು ನಡೆಯತೊಡಗಿವೆ.
ಫಗ್ವಾರಾದ ಜಾಮಾ ಮಸೀದಿಯ ಇಮಾಮ್ ವೌಲಾನಾ ಉವೈಸುರ್ರಹ್ಮಾನ್ ಲುಧಿಯಾನ್ವಿ ಅವರ ಪ್ರಯತ್ನಗಳಿಂದಾಗಿ ಈ ಉಮರ್ ಮಸ್ಜಿದ್ ವಾಪಸ್ ಮುಸ್ಲಿಮರ ವಶಕ್ಕೆ ಬಂದಿದೆ. ಜಾಮಾ ಮಸೀದಿ ಕೂಡ ಬೇರೊಬ್ಬರ ಅಕ್ರಮ ವಶದಲ್ಲಿದ್ದು, ಖ್ಯಾತ ಸ್ವಾತಂತ್ರ ಹೋರಾಟಗಾರ ವೌಲಾನಾ ಖಲೀಲುರ್ರಹ್ಮಾನ್ ಅವರ ಪ್ರಯತ್ನಗಳಿಂದಾಗಿ 1950ರಲ್ಲಿ ಮರಳಿ ಮುಸ್ಲಿಮರ ಕೈಸೇರಿತ್ತು.
ಮರುವಶದ ಬಳಿಕ ನಡೆದ ಮೊದಲ ಪ್ರಾರ್ಥನೆಯ ನೇತೃತ್ವವನ್ನು ಮಜ್ಲಿಸ್ ಅಹ್ರಾರ್-ಎ-ಇಸ್ಲಾಮ್ ಹಿಂದ್‌ನ ನಾಯಕ ಹಾಗೂ ಪಂಜಾಬ್‌ನ ಉಪ ಶಾಹಿ ಇಮಾಮ್ ವೌಲಾನಾ ಮುಹಮ್ಮದ್ ಉಸ್ಮಾನ್ ರಹ್ಮಾನಿ ಅವರು ವಹಿಸಿದ್ದರು.
ಮೊದಲ ನಮಾಝಿನ ಬಳಿಕ ಮಾತನಾಡಿದ ವೌಲಾನಾ ಉವೈಸುರ್ರಹ್ಮಾನ್ ಅವರು ತನ್ನ ಪ್ರಯತ್ನಗಳನ್ನು ಬೆಂಬಲಿಸಿದ್ದಕ್ಕಾಗಿ ಹಿಂದು ಮತ್ತು ಸಿಖ್ ಬಾಂಧವರಿಗೆ ಕೃತಜ್ಞತೆ ಸಲ್ಲಿಸಿದರು.