ಕೇಂದ್ರ ಸಚಿವ ಮನೋಜ್ ಸಿನ್ಹಾರ ವಾಹನ ಅಪಘಾತ: ಕೈ ಮೂಳೆ ಮುರಿತ
Update: 2016-12-24 23:52 IST
ಗೋರಖ್‌ಪುರ, ಡಿ.24: ಉತ್ತರಪ್ರದೇಶದ ಗೋರಖ್‌ಪುರ ಪಟ್ಟಣದ ಸಮೀಪ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತವೊಂದರಲ್ಲಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಗಾಯಗೊಂಡಿದ್ದಾರೆ.
ಬಾರಾಬಂಕಿಯಿಂದ ಗೋರಖ್‌ಪುರಕ್ಕೆ ಬರುತ್ತಿದ್ದ ವೇಳೆ, ನಿನ್ನೆ ರಾತ್ರಿ 7:15ರ ವೇಳೆಗೆ ಇಲ್ಲಿಗೆ ಸಮೀಪದ ತಪತಿ ನದಿಯ ಸೇತುವೆಯ ಬಳಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿನ್ಹಾರ ಎಡಗೈಯ ಮೂಳೆ ಮುರಿದಿದೆಯೆಂದು ಈಶಾನ್ಯ ರೈಲ್ವೆಯ ಸಿಪಿಆರ್‌ಒ ಸಂಜಯ್ ಯಾದವ್ ತಿಳಿಸಿದ್ದಾರೆ.
ಗೋರಖ್‌ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ, 57ರ ಹರೆಯದ ರೈಲ್ವೆ ಮತ್ತು ಸಂಪರ್ಕ ಸಹಾಯಕ ಸಚಿವ ಸಿನ್ಹಾರನ್ನು, ಮೊದಲು ಅಪೊಲೊ ಆಸ್ಪತ್ರೆಗೆ ದಾಖಲಿಸಿದ ಬಳಿಕ, ರೈಲ್ವೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಸಚಿವರ ವೈಹಾಳಿಯಲ್ಲಿದ್ದ ವಾಹನವೊಂದು ವ್ಯಕ್ತಿಯೊಬ್ಬನಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಠಾತ್ ಬ್ರೇಕ್ ಹಾಕಿತು. ಹಿಂದಿದ್ದ ಸಚಿವರ ಕಾರು ಅದಕ್ಕೆ ಢಿಕ್ಕಿ ಹೊಡೆದಾಗ ಅವರು ಗಾಯಗೊಂಡರೆಂದು ಮೂಲಗಳು ತಿಳಿಸಿವೆ.