ದಂಗಲ್: ಮರೆಯಲಾಗದ ಅನುಭವ

Update: 2016-12-24 18:29 GMT

ದಂಗಲ್ ಕೇವಲ ಒಂದು ಚಿತ್ರವಲ್ಲ. ಅದೊಂದು ಅದ್ಭುತ ಅನುಭವ. ಖಂಡಿತವಾಗಿಯೂ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬ ಪ್ರೇಕ್ಷಕ ಇದನ್ನು ಒಪ್ಪಿಕೊಳ್ಳುತ್ತಾನೆ. ದಂಗಲ್ ತೆರೆಯ ಮೇಲೆ ತೆರೆದುಕೊಳ್ಳುತ್ತಿದ್ದಂತೆಯೇ ಚಿತ್ರದ ಪ್ರತಿಯೊಂದು ಪಾತ್ರಗಳು, ಸನ್ನಿವೇಶಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ. 161 ನಿಮಿಷಗಳ ಈ ಅವಿಸ್ಮರಣೀಯ ಸಿನೆಮಾ ಪ್ರಯಾಣದಲ್ಲಿ ಪ್ರೇಕ್ಷಕ ಕೂಡಾ ದಂಗಲ್‌ನ ಪಾತ್ರವಾಗಿ ಬಿಡುತ್ತಾನೆ.

   ಈ ವರ್ಷ ತೆರೆಕಂಡ ‘ಸುಲ್ತಾನ್’ ಕೂಡಾ ಕುಸ್ತಿಪಟುವೊಬ್ಬನ ಜೀವನಾ ಧಾರಿತ ಕಥೆಯಾಗಿತ್ತು. ದಂಗಲ್ ಕೂಡಾ ಕುಸ್ತಿಪಟುವನ್ನು ತನ್ನಿಬ್ಬರು ಪುತ್ರಿಯರನ್ನು ಅಂತಾರಾಷ್ಟ್ರೀಯ ಕುಸ್ತಿತಾರೆಯನ್ನಾಗಿ ಮಾಡಿದ ನೈಜ ಕಥಾವಸ್ತುವನ್ನು ಆಧರಿಸಿದೆ. ಆದರೆ ಸುಲ್ತಾನ್ ಮಾಸ್ ಚಿತ್ರವಾಗಿದ್ದರೆ, ದಂಗಲ್ ಒಂದು ಭಾವನಾತ್ಮಕ ಚಿತ್ರವಾಗಿದೆ. ಇಲ್ಲಿ ಆಮಿರ್ ಖಾನ್‌ರ ಹೀರೋಯಿಸಂಗೆ ಪ್ರಾಧಾನ್ಯತೆ ನೀಡದೆ, ಅಭಿನಯಕ್ಕಷ್ಟೇ ಪ್ರಾಧಾನ್ಯತೆ ನೀಡಲಾಗಿದೆ. ಮಹಾವೀರ ಪೋಗಟ್ (ಆಮಿರ್‌ಖಾನ್) ಹರ್ಯಾಣದ ಕುಸ್ತಿಪಟು. ಆದರೆ ಆತನಿಗೆ ಒಂದೇ ಒಂದು ಪ್ರಶಸ್ತಿಯನ್ನೂ ಕೂಡ ಗೆಲ್ಲಲು ಸಾಧ್ಯವಾಗಲಿಲ್ಲ. ದಯಾ(ಸಾಕ್ಷಿ ತನ್ವರ್)ಳನ್ನು ವಿವಾಹವಾದ ಮಹಾವೀರ್, ತನಗೆ ಹುಟ್ಟುವ ಮಗನಾದರೂ ಕುಸ್ತಿ ಪಟುವಾಗಿ ದೇಶಕ್ಕೆ ಚಿನ್ನದ ಪದಕ ತರಬೇಕೆಂಬ ಉತ್ಕಟವಾದ ಹಂಬಲವನ್ನು ಹೊಂದಿರುತ್ತಾನೆ. ಆದರೆ ವಿಧಿಯಾಟ ಬೇರೆಯೇ ಇತ್ತು.

ದಯಾ ಒಂದರನಂತರ ಒಂದರಂತೆ ನಾಲ್ಕು ಹೆಣ್ಣು ಮಕ್ಕಳನ್ನು ಹೆರುತ್ತಾಳೆ. ತನ್ನ ಇಚ್ಛೆ ಕೈಗೂಡಲಿಲ್ಲವೆಂಬ ನಿರಾಶೆ ಮಹಾವೀರ್‌ನನ್ನು ಆವರಿಸುತ್ತದೆ. ಆದರೆ ಆತ ತನ್ನ ಮಕ್ಕಳನ್ನು ಅತ್ಯಂತ ಆಕ್ಕರೆಯೊಂದಿಗೆ ಬೆಳೆಸುತ್ತಾನೆ. ಒಂದು ದಿನ ಮಹಾವೀರ್‌ನ ಮೊದಲ ಹಾಗೂ ಎರಡನೆ ಪುತ್ರಿಯರಾದ ಗೀತಾ (ಫಾತಿಮಾ ಸಾನಾ ಶೇಖ್) ಹಾಗೂ ಬಬಿತಾ (ಸಾನ್ಯಾ ಮಲ್ಹೋತ್ರಾ), ಸ್ಥಳೀಯ ಹುಡುಗರನ್ನು ಥಳಿಸುತ್ತಾರೆ. ವಿಷಯ ತಿಳಿದ ಮಹಾವೀರ್, ಗಂಡುಮಕ್ಕಳಿಲ್ಲದಿದ್ದರೇನಂತೆ ತನ್ನ ಹೆಣ್ಣು ಮಕ್ಕಳನ್ನೇ ಕುಸ್ತಿಪಟುಗಳನ್ನಾಗಿ ಮಾಡಿ ರಾಷ್ಟ್ರಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಡುತ್ತೇನೆ ಎಂಬ ದೃಢಸಂಕಲ್ಪ ಮಾಡುತ್ತಾನೆ. ಹೀಗೆ ಪುತ್ರಿಯರ ಮೂಲಕ ಮಹಾವೀರ್‌ನ ಚಿನ್ನದ ಬೇಟೆ ಆರಂಭವಾಗುತ್ತದೆ. ಮಹಾವೀರ್‌ನ ಸೋದರಳಿಯ (ಅಪಾರ್‌ಶಕ್ತಿ ಖುರಾನ),ಕೂಡಾ ಈ ಬಾಲಕಿಯರೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳುತ್ತಾನೆ.

ಮಹಾವೀರ್‌ನ ಕಠಿಣ ಪರಿಶ್ರಮದ ಫಲವೆಂಬಂತೆ ಶೀಘ್ರದಲ್ಲೇ ಗೀತಾ ಹಾಗೂ ಬಬಿತಾ ರಾಷ್ಟ್ರೀಯ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆ. ಆದರೆ 2010 ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ತರಬೇತಿ ಪಡೆಯಲು ಪಾಟಿಯಾಲದಲ್ಲಿರುವ ರಾಷ್ಟ್ರೀಯ ಕ್ರೀಡಾ ಅಕಾಡಮಿಗೆ ಪ್ರವೇಶಿಸಿದಾಗ ಅವರ ಬದುಕಿನಲ್ಲಿ ಅಲ್ಲೋಲಕಲ್ಲೋಲ ವುಂಟಾಗುತ್ತದೆ. ಹೀಗೆ ಚಿತ್ರವು ಕ್ಷಣಕ್ಷಣವೂ ಪ್ರೇಕ್ಷಕರನ್ನು ಕುತೂಹಲದ ಪರಾಕಾಷ್ಠೆಗೆ ಕೊಂಡೊಯ್ಯುತ್ತದೆ. ಚಿತ್ರದ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸುತ್ತವೆ. ಒಂದು ಬಯೋಪಿಕ್ ಚಿತ್ರವನ್ನು ಕೂಡಾ ಅತ್ಯಂತ ಹೃದಯಸ್ಪರ್ಶಿಯಾಗಿ ಬೆಳ್ಳಿತೆರೆಯಲ್ಲಿ ಮೂಡಿಸ ಬಹುದೆಂಬುದನ್ನು ದಂಗಲ್ ತೋರಿಸಿಕೊಟ್ಟಿದೆ.

ದಂಗಲ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ನಿರ್ದೇಶಕ ನಿತೇಶ್ ತಿವಾರಿ ಅವರ ಪರಿಶ್ರಮ ಎದ್ದುಕಾಣುತ್ತಿದೆ. ‘ಭೂತ್‌ನಾಥ್ ರಿಟರ್ನ್ಸ್’ ಹಾಗೂ ‘ಚಿಲ್ಲರ್ ಪಾರ್ಟಿ’ಯಂತಹ ಸಾಧಾರಣ ಚಿತ್ರಗಳನ್ನು ನಿರ್ದೇ ಶಿಸಿದ್ದ ಅವರಲ್ಲಿ ಇಷ್ಟೊಂದು ಅಗಾಧವಾದ ಪ್ರತಿಭೆಯಿರುವುದು ಯಾರೂ ನಿರೀಕ್ಷಿಸಿರಲಿಕ್ಕಿಲ್ಲ. ದಂಗಲ್ ಚಿತ್ರದೊಂದಿಗೆ ನಿತೀಶ್ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನು ನೆಟ್ಟಿದ್ದಾರೆ.
 ಛಾಯಾಗ್ರಾಹಕ ಸೇತು, ತನ್ನ ಕ್ಯಾಮರಾ ಕಣ್ಣುಗಳಿಂದ ಹರ್ಯಾಣದ ಹಳ್ಳಿಗಳನ್ನು, ಕುಸ್ತಿಯ ಆಖಾಡಗಳನ್ನು ಅತ್ಯದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನು ನಾಯಕ ನಟ ಆಮಿರ್ ಖಾನ್, ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ಮಹಾವೀರ್ ಪೋಗಟ್‌ನ ಪಾತ್ರದಲ್ಲಿ ಅವರು ಪರಾಕಾಯ ಪ್ರವೇಶ ಮಾಡಿದ್ದಾರೆ. ಯಾವ ಸ್ಕ್ರಿಪ್ಟ್ ಕೊಟ್ಟರೂ, ತಾನು ಮ್ಯಾಜಿಕ್ ಮಾಡಬಲ್ಲೆನೆಂಬುದನ್ನು ಅವರು ದಂಗಲ್‌ನಲ್ಲಿ ಸಾಬೀತುಪಡಿಸಿದ್ದಾರೆ. ಕುಸ್ತಿಪಟುವಿನ ಪಾತ್ರಕ್ಕಾಗಿ ತನ್ನ ದೇಹವನ್ನು ಹುರಿಗೊಳಿಸಿದ ರೀತಿ ನಿಜಕ್ಕೂ ಅಸಾಧಾರಣ. ಚಿತ್ರದ ದ್ವಿತೀಯಾ ರ್ಧದಲ್ಲಿ ಅವರ ಅಭಿನಯವಂತೂ ಸೂಪರ್ಬ್. ದಂಗಲ್ ಆಮಿರ್ ತನ್ನ ಅಭಿಮಾನಿಗಳಿಗೆ ನೀಡಿದ ವಿಶೇಷ ಉಡುಗೊರೆ ಎಂದರೂ ಸರಿಯೇ.

ಆಮಿರ್ ಪತ್ನಿಯಾಗಿ ಸಾಕ್ಷಿ ತನ್ವರ್, ಉತ್ತಮವಾಗಿ ನಟಿಸಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಈ ನಟಿ ತಾನೋರ್ವ ಅಪ್ಪಟ ಕಲಾವಿದೆ ಯೆಂಬುದನ್ನು ನಿರೂಪಿಸಿದ್ದಾರೆ. ತಂದೆಯ ಕನಸನ್ನು ಈಡೇರಿಸುವ ಪುತ್ರಿಯರಾಗಿ ನಟಿಸಿರುವ ಫಾತಿಮಾ ಸಾನಾ ಸೇಖ್ ಹಾಗೂ ಸಾನ್ಯಾ ಮಲ್ಹೋತ್ರಾ ನಿಜಕ್ಕೂ ಪ್ರತಿಭೆಯ ಶಿಖರಗಳಾಗಿದ್ದಾರೆ. ಇವರ ಸಹಜ ಅಭಿನಯ ಬಹುಕಾಲಕ್ಕೂ ನೆನಪಿನಲ್ಲಿ ಉಳಿಯಲಿದೆ. ವಿವಾನ್ ಭತೆನಾ ಹಾಗೂ ಗಿರೀಶ್ ಕುಲಕರ್ಣಿ ಅವರ ಪಾತ್ರಗಳು ಪುಟ್ಟದಾದರೂ ಚೊಕ್ಕವಾಗಿ ಅಭಿನಯಿಸಿದ್ದಾರೆ.

ಚಿತ್ರದ ಕೆಲವು ಭಾಗಗಳು ಅದರಲ್ಲೂ ವಿಶೇಷವಾಗಿ ಚಿತ್ರದ ಕೊನೆಯ ಕುಸ್ತಿ ಪಂದ್ಯದ ಸನ್ನಿವೇಶವು ಶಾರುಕ್ ಖಾನ್ ಅವರ ‘ಚಕ್ ದೇ ಇಂಡಿಯಾ’ವನ್ನು ನೆನಪಿಸುತ್ತದೆ. ಪ್ರೀತಂ ಅವರ ಸಂಗೀತವು ಚಿತ್ರಕ್ಕೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ. ಕ್ರೀಡೆ ಹಾಗೂ ಭಾವಾನಾತ್ಮಕ ಸನ್ನಿವೇಶಗಳಿಂದ ಕೂಡಿದ ಚಿತ್ರಕ್ಕೆ ಬೇಕಾದ ಹಿನ್ನೆಲೆ ಸಂಗೀತವನ್ನು ಅವರು ನೀಡಿದ್ದಾರೆ. ದಲೇರ್ ಮೆಹೆಂದಿ ಹಾಡಿರುವ ಟೈಟಲ್ ಹಾಡು ಚೇತೋಹಾರಿಯಾಗಿದೆ.

2016ರಲ್ಲಿ ಬಾಲಿವುಡ್ ಕಂಡ ಅತ್ಯುತ್ತಮ ಚಿತ್ರ ದಂಗಲ್ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಚಿತ್ರವು ಆಮಿರ್ ಖಾನ್ ಅಭಿಮಾನಿಗಳಿಗೆ ಮಾತ್ರವಲ್ಲ ಸದಭಿರುಚಿಯ ಚಿತ್ರಗಳನ್ನು ಇಷ್ಟಪಡುವವರಿಗೂ ರಸದೌತಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News