ಇಲ್ಲ, ಭಾರತದ ಆರ್ಥಿಕತೆ ಇಂಗ್ಲೆಂಡ್‌ಗಿಂತ ದೊಡ್ಡದಾಗಿದೆ ಎಂಬ ವರದಿಗಳು ತಪ್ಪು; ಆದರೆ...
ಹೊಸದಿಲ್ಲಿ, ಡಿ.25: ಭಾರತದ ಆರ್ಥಿಕತೆ ಇಂಗ್ಲೆಂಡ್ ಆರ್ಥಿಕತೆಗಿಂತ ದೊಡ್ಡದೇ? ಈ ಬಗ್ಗೆ ನೀವು ಓದಿದ್ದರೂ ಸದ್ಯಕ್ಕೆ ನಿಮ್ಮ ಮಾಹಿತಿ ಸರಿಯಲ್ಲ.
ಹಲವು ದಿನಗಳಿಂದ ಭಾರತೀಯ ಮಾಧ್ಯಮಗಳು ಹೆಮ್ಮೆಯಿಂದ ಈ "ವಾಸ್ತವ"ವನ್ನು ಬಿಚ್ಚಿಟ್ಟಿವೆ. ಭಾರತ ಸಾಧಿಸಿದ ಈ ಮಹತ್ವದ ಮೈಲುಗಲ್ಲಿನ ಬಗ್ಗೆ ಶ್ಲಾಘಿಸಿ, ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್‌ಪ್ರೆಸ್ ಹಾಗೂ ಎಕನಾಮಿಕ್ ಟೈಮ್ಸ್‌ನಂಥ ಪತ್ರಿಕೆಗಳು ವರದಿ ಮಾಡಿವೆ. 150 ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಈ ಸಾಧನೆ ಮಾಡಿವೆ ಎಂದು ಬಣ್ಣಿಸಿವೆ.
ಕೇಂದ್ರದ ಗೃಹಖಾತೆ ಮಾಜಿ ಸಚಿವ ಇದನ್ನು ಸತ್ಯ ಎಂದು ಟ್ವೀಟ್ ಮಾಡಿದ್ದಾರೆ. ಆಡಳಿತಾರೂಢ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ, ಇದನ್ನು ಮೋದಿಯ ಭಾವಚಿತ್ರ ಹಾಕಿ, ಇದು ಮೋದಿ ಯಶಸ್ಸಿಗೆ ನಿದರ್ಶನ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳಾದ ಸ್ಪುಟ್ನಿಕ್ ಇಂಟರ್‌ನ್ಯಾಷನಲ್, ಐರಿಷ್ ಇಂಡೆಪೆಂಡೆಂಟ್, ದ ಡೈಲಿ ಮೈಲ್, ದ ಇಂಡೆಪೆಂಡೆಂಟ್ ಕೂಡಾ ಇಂಥ ವರದಿ ಮಾಡಿವೆ. ಅಮೆರಿಕ ಮೂಲದ ಫಾರಿನ್ ಪಾಲಿಸಿ ಮ್ಯಾಗಝಿನ್‌ನಲ್ಲೂ ಇದೇ ವರದಿ ಪ್ರಕಟವಾಗಿದೆ. ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ, ಬ್ರಿಟನನ್ನು ಹಿಂದಿಕ್ಕಿದೆ ಎಂದು ಬಣ್ಣಿಸಿದೆ.
ಇದಕ್ಕೆ ಕಾರಣವಾದದ್ದು ಫ್ರೋಬ್ಸ್.ಕಾಮ್‌ನಲ್ಲಿ ಪ್ರಕಟವಾದ ಒಂದು ಲೇಖನ. ಅದರಲ್ಲಿ ಅಭಿಪ್ರಾಯ ಲೇಖನವೊಂದರಲ್ಲಿ, ಭಾರತದ ಆರ್ಥಿಕತೆ ಬ್ರಿಟನ್‌ನನ್ನು ಮೀರಿಸಿದೆ ಎಂದು ಹೇಳಲಾಗಿತ್ತು. ಬ್ರಿಟಿಷ್ ಪೌಂಡ್ ಬೆಲೆ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ಲೇಖಕ ಅಭಿಪ್ರಾಯಪಟ್ಟಿದ್ದರು. ಇದರ ವಿನಿಮಯ ದರ ಸುಮಾರು 2.29 ದಶಸಹಸ್ರ ಕೋಟಿ ಡಾಲರ್ ಆಗುತ್ತದೆ. ಆದರೆ ಭಾರತದ ಆರ್ಥಿಕತೆಯ ಅಂದಾಜು ಮೌಲ್ಯ 2.30 ದಶಸಹಸ್ರ ಕೋಟಿ ಆಗಬಹುದು ಎಂದು ಅಂದಾಜಿಸಿದ್ದರು. ಇದನ್ನೇ ಮಾಧ್ಯಮಗಳು ತಪ್ಪಾಗಿ ವಿಶ್ಲೇಷಿಸಿ, ಭಾರತ ಬ್ರಿಟನ್ ದೇಶವನ್ನು ಹಿಂದಿಕ್ಕಿದೆ ಎಂದು ವರದಿ ಪ್ರಕಟಿಸಿದ್ದವು.