ತನ್ನ ಭಾಷಣ ಕದ್ದಿದ್ದಾರೆಂದು ರಾಷ್ಟ್ರಾಧ್ಯಕ್ಷರ ವಿರುದ್ಧವೇ ದೂರು ದಾಖಲಿಸಿದ 6ನೆ ತರಗತಿಯ ಪೋರ
ಇಸ್ಲಾಮಾಬಾದ್, ಡಿ.25: ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತಾನು ಮಾಡಲು ಸಿದ್ಧಪಡಿಸಿದ್ದ ಭಾಷಣವನ್ನು ರಾಷ್ಟ್ರಾಧ್ಯಕ್ಷರಾದ ಮಮ್ನೂನ್ ಹುಸೇನ್ ಕದ್ದಿದಾರೆಂದು ಆರೋಪಿಸಿ ಅವರ ವಿರುದ್ಧ ಆರನೆ ತರಗತಿಯ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದಾನೆ.
ಹನ್ನೊಂದು ವರ್ಷದ ಈ ಬಾಲಕ ಮುಹಮ್ಮದ್ ಸಬೀಲ್ ಹೈದರ್ ತನ್ನ ತಂದೆ ನಸೀಮ್ ಅಬ್ಬಾಸ್ ನಾಸಿರ್ ಮೂಲಕ ಈ ಸಂಬಂಧ ಇಸ್ಲಾಮಾಬಾದ್ ಹೈಕೋರ್ಟ್ ಸಂಪರ್ಕಿಸಿದ್ದಾನೆ. ರಾಷ್ಟ್ರಾಧ್ಯಕ್ಷರ ವಿರುದ್ಧವೇ ಕಳವು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾನೆ. ತನ್ನ ಅನುಮತಿ ಇಲ್ಲದೇ ಅದನ್ನು ಬೇರೆಯವರಿಗೆ ನೀಡಿದ್ದು ತಪ್ಪು ಎನ್ನುವುದು ಪೋರನ ವಾದ.
ನ್ಯಾಯಮೂರ್ತಿ ಅಮಿರ್ ಫಾರೂಕ್ ಅವರು, ಈ ಪೋರ ನೀಡಿದ ದೂರನ್ನು ವಿಚಾರಣೆಗೆ ಸ್ವೀಕರಿಸಬಹುದೇ ಎಂಬ ಬಗೆಗಿನ ತೀರ್ಪನ್ನು ಕಾಯ್ದಿರಿಸಿದ್ದಾರೆ. ಹೈದರ್, ರಾಷ್ಟ್ರಾಧ್ಯಕ್ಷರ ಕಚೇರಿಯ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ, ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು, ಪಾಕಿಸ್ತಾನದ ಇಲೆಕ್ಟ್ರಾನಿಕ್ ಮೀಡಿಯಾ ರೆಗ್ಯಲೇಟರಿ ಅಥಾರಿಟಿ, ಪಾಕಿಸ್ತಾನ ಟೆಲಿವಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಸ್ಲಾಮಾಬಾದ್ ಬಾಲಕಿಯರ ಕಾಲೇಜಿನ ಪ್ರಾಚಾರ್ಯರಾದ ಅಯೇಷಾ ಇಶ್ತಿಕ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಹೈದರ್ ಅವರು ಇಸ್ಲಾಮಾಬಾದ್ ಮಾದರಿ ಬಾಲಕರ ಕಾಲೇಜಿನಲ್ಲಿ ಓದುತ್ತಿದ್ದು, ರಾಷ್ಟ್ರಾಧ್ಯಕ್ಷರ ಕಚೇರಿ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ತಾನು ಭಾಗವಹಿಸಿದ್ದೆ. ಕಳೆದ ವರ್ಷದ ಮಾರ್ಚ್ 23ರಂದು ತಾನು ಮಾಡಿದ ಭಾಷಣಕ್ಕೆ ರಾಷ್ಟ್ರಪತಿಗಳು ಪ್ರಶಂಸಾ ಪತ್ರವನ್ನು ನೀಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.