×
Ad

ಪುಣೆಯಲ್ಲಿ ಮಹಿಳಾ ಟೆಕ್ಕಿಯ ಬರ್ಬರ ಹತ್ಯೆ

Update: 2016-12-25 23:59 IST

ಪುಣೆ,ಡಿ.25: ನಗರದ ಹೊರವಲಯದಲ್ಲಿರುವ ಐಟಿ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪಶ್ಚಿಮ ಬಂಗಾಲ ಮೂಲದ ಯುವತಿಯನ್ನು ನಿನ್ನೆ ರಾತ್ರಿ ಆಕೆಯ ಕಚೇರಿಯ ಸಮೀಪವೇ ಅಪರಿಚಿತ ದುಷ್ಕರ್ಮಿಯೋರ್ವ ಚೂರಿಯಿಂದ ಹಲವಾರು ಬಾರಿ ಇರಿದು ಹತ್ಯೆಗೈದಿದ್ದಾನೆ. ಅಂತರಾ ದಾಸ್(23) ಕೊಲೆಯಾಗಿರುವ ಟೆಕ್ಕಿ. ನಿನ್ನೆ ರಾತ್ರಿ ಎಂಟು ಗಂಟೆಗೆ ತಾತ್‌ವಾಡೆ ಪ್ರದೇಶದಲ್ಲಿರುವ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಹಂತಕ ಆಕೆಯ ಮೇಲೆ ಮುಗಿಬಿದ್ದು ಚೂರಿಯಿಂದ ಇರಿದಿದ್ದಾನೆ. ಜೀವ ಉಳಿಸಿಕೊಳ್ಳಲು ಆಕೆ ಓಡಿದಾಗ ಬೆನ್ನಟ್ಟಿದ ಆತ ಹಲವರು ಬಾರಿ ಇರಿದು ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂತರಾಳನ್ನು ದಾರಿಹೋಕರು ತಕ್ಷಣವೇ ಸಮೀಪದ ಧನ್ವಂತರಿ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗೆ ಆಕೆ ಕೊನೆಯುಸಿರೆಳೆದಿದ್ದಳು.

ಅಂತರಾ ಧರಿಸಿದ್ದ ಚಿನ್ನಾಭರಣಗಳು ಹಾಗೆಯೇ ಇದ್ದು, ಇದು ಆಕೆಯನ್ನು ದೋಚುವ ಉದ್ದೇಶದಿಂದ ನಡೆಸಲಾದ ಕೃತ್ಯವಲ್ಲ ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 ಅಂತರಾ ರಾತ್ರಿ ಎಂಟು ಗಂಟೆಗೆ ಕಂಪೆನಿಯಿಂದ ಹೊರಟಿದ್ದು, ತನಗೆ ಕಂಪೆನಿಯ ಕ್ಯಾಬ್ ಬೇಡ. ರಿಕ್ಷಾದಲ್ಲಿ ಹೋಗುತ್ತೇನೆ ಎಂದು ಕಚೇರಿಯ ರಿಜಿಸ್ಟರ್‌ನಲ್ಲಿ ಬರೆದಿದ್ದಳು ಎಂದು ಆಕೆ ಕೆಲಸ ಮಾಡುತ್ತಿದ್ದ ಕೇಪ್‌ಜೆಮಿನಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News