‘ಚನ್ನನ’ ಬ್ಯಾರಿ ಜಾನಪದ ಕಥಾ ಸಂಕಲನ ಬಿಡುಗಡೆ

Update: 2016-12-26 10:14 GMT

ಮಂಗಳೂರು, ಡಿ.26: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಕಟಿಸಿದ, ಪತ್ರಕರ್ತ ಹಂಝ ಮಲಾರ್ ಸಂಪಾದಿಸಿದ ‘ಚನ್ನನ’ ಬ್ಯಾರಿ ಜಾನಪದ ಕಥಾ ಸಂಕಲನವನ್ನು ಅಕಾಡಮಿಯ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಪ್ರೊ. ಬಿ.ಎಂ. ಇಚ್ಲಂಗೋಡು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಬ್ಯಾರಿ ಭಾಷೆಯ ಪುನರುಜ್ಜೀವನಕ್ಕೆ ಅಕಾಡಮಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಇದೀಗ ಬ್ಯಾರಿ-ಕನ್ನಡ-ಇಂಗ್ಲಿಷ್ ನಿಘಂಟು ಕಾರ್ಯ ಪ್ರಗತಿಯಲ್ಲಿದೆ. ಅದಕ್ಕೆ ಪೂರಕವಾಗಿ ಬ್ಯಾರಿ ಜಾನಪದ ಕಥಾ ಸಂಕಲನ ಹೊರ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅವನತಿಯತ್ತ ಸಾಗುವ ಭಾಷೆಗಳ ಪುನರುಜ್ಜೀವನಕ್ಕೆ ಇಂತಹ ಪ್ರಯತ್ನ ಶ್ಲಾಘನಾರ್ಹ ಎಂದರು.

ಕೃತಿಯನ್ನು ಪರಿಚಯಿಸಿದ ಲೇಖಕ ಅಬ್ದುರ್ರಹ್ಮಾನ್ ಕುತ್ತೆತ್ತೂರು, ಈ ಸಂಕಲನದಲ್ಲಿ ಕನ್ನಡ ಅಥವಾ ಇಂಗ್ಲಿಷ್ ಭಾಷೆಯ ಪ್ರಭಾವವಿಲ್ಲ. ಅದು ಈ ಕೃತಿಯ ಹೆಗ್ಗಳಿಕೆಯಾಗಿದೆ. ಕಥಾಲೋಕದಿಂದ ದೂರ ಸರಿಯುವ ಯುವ ಜನಾಂಗಕ್ಕೆ ಇಂತಹ ಕೃತಿಗಳು ಭಾಷೆಯ ಮೇಲೆ ಅಭಿಮಾನ ಹುಟ್ಟಲು ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು. ಅಕಾಡಮಿಯ ರಿಜಿಸ್ಟ್ರಾರ್ ಉಮರಬ್ಬ ಅಧ್ಯಕ್ಷತೆ ವಹಿಸಿದ್ದರು.

ಅಕಾಡಮಿಯ ಸದಸ್ಯ ಆಲಿಯಬ್ಬ ಜೋಕಟ್ಟೆ ಉಪಸ್ಥಿತರಿದ್ದರು. ಸದಸ್ಯ ಶರೀಫ್ ನಿರ್ಮುಂಜೆ ಸ್ವಾಗತಿಸಿದರು. ಮಾಜಿ ಸದಸ್ಯ ಖಾಲಿದ್ ಉಜಿರೆ ಬ್ಯಾರಿ ಗೀತೆಗಳನ್ನು ಹಾಡಿದರು. ಸದಸ್ಯೆ ಆಯಿಶಾ ಪೆರ್ಲ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News