ಮರ-ದಹನ
ಮಾನ್ಯರೆ,
ಉಡುಪಿ ನಗರದಲ್ಲಿ ಎತ್ತ ಕಣ್ಣು ಹಾಯಿಸಿದರೂ ಕಾಣ ಸಿಗುವುದು ಕಾಂಕ್ರಿಟೀಕರಣಗೊಂಡ ಗಗನ ಚುಂಬಿ ಕಟ್ಟಡಗಳು. ನಗರೀಕರಣಕ್ಕೆ ತುತ್ತಾಗಿ ಇಲ್ಲಿನ ಮರ-ಗಿಡಗಳೆಲ್ಲ ನಶಿಸಿ ಹೋಗಿವೆೆ. ಇಂತಹ ಪರಿಸ್ಥಿತಿಯಲ್ಲಿಯೂ ಹಚ್ಚ ಹಸಿರಿನ ಸೊಬಗು ಉಳಿದು ಕೊಂಡಿದ್ದು ಅಜ್ಜರಕಾಡು ಪಾರ್ಕಿನಲ್ಲಿ ಮಾತ್ರ. ಆದರೆ ಇಲ್ಲಿಯೂ ಮರಗಳಿಗೆ ಕುತ್ತು ಬಂದೊದಗಿರುವುದು ದುರ್ದೈವ.
ಇತ್ತೀಚಿನವರೆಗೂ ಹಸಿರಿನಿಂದ ಕಂಗೊಳಿಸುತ್ತಿದ್ದ, ಪಕ್ಷಿ ಸಂಕುಲಕ್ಕೆ ಆಶ್ರಯ ನೀಡುತ್ತಿದ್ದ ಇಲ್ಲಿನ ಮರವೊಂದು, ಪಾರ್ಕ್ ಸ್ವಚ್ಛತೆ ನಡೆಸುವ ಸಂದರ್ಭದಲ್ಲಿ ಕಸದ ರಾಶಿಗೆ ಹಾಕಿದ ಬೆಂಕಿಯ ಪರಿಣಾಮ ದಹಿಸಲ್ಪಟ್ಟು ನಿಸರ್ಗ ಪ್ರಿಯರು ಆ ದೃಶ್ಯ ಕಂಡು ಮನನೊಂದುಕೊಳ್ಳುವಂತಾಗಿದೆ.
ಕಾರ್ಮಿಕರು ಕೆಲಸ ಮಾಡುವಾಗ ಒಂದಿಷ್ಟು ಮುನ್ನೆಚ್ಚರಿಕೆ ವಹಿಸಿದ್ದರೆ ಮರಕ್ಕಾಗುವ ಜೀವ ಹಾನಿಯನ್ನು ತಪ್ಪಿಸಲು ಸಾಧ್ಯವಿತ್ತು ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಈ ಸಾರ್ವಜನಿಕ ಪರಿಸರ ಹಾನಿಗೆ ಯಾರು ಹೊಣೆ...?
ಈ ಮರ ಅಗ್ನಿ ಶಾಖಕ್ಕೆ ತುತ್ತಾದ್ದರಿಂದ ಕರಾವಳಿಯ ಬಿಸಿಲ ಧಗೆಗೆ ಬದುಕುವುದು ಕಷ್ಟ. ಹಾಗಾಗಿ ಸಂಬಂಧ ಪಟ್ಟವರು ಮರದ ಬುಡಕ್ಕೆ ಪ್ರತಿದಿನ ನೀರು ಹಾಕುವ ವ್ಯವಸ್ಥೆ ಮಾಡಿದರೆ. ಮರ ಚಿಗುರುವ ಅವಕಾಶವಿದೆ.