ಪತಂಗ...ಬೇಡ ಬೇಡ ಬೆಂಕಿಯ ಸಂಗ...
ಹಿರಿಯ ಸಮಾಜವಾದಿ ನಾಯಕ, ದಲಿತ ಮುಖಂಡ ಶ್ರೀನಿವಾಸ ಪ್ರಸಾದ್ ಅವರು ಕೊನೆಗೂ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಅಂತಿಮವಾಗಿದೆ. ಈ ತೀರ್ಮಾನದಿಂದ ಬಹುಶಃ ಅತ್ಯಂತ ನೆಮ್ಮದಿಯಿಂದಿರುವುದು ಕಾಂಗ್ರೆಸ್ ಪಕ್ಷವೇ ಇರಬೇಕು. ಯಾಕೆಂದರೆ ಶ್ರೀನಿವಾಸ್ ಪ್ರಸಾದ್ ಅವರು ಬೇರ್ಯಾವುದೋ ಪಕ್ಷವನ್ನು ಸೇರಿ ಕಾಂಗ್ರೆಸ್ ವಿರುದ್ಧ ಸಡ್ಡು ಹೊಡೆದಿದ್ದರೆ ಸಿದ್ದರಾಮಯ್ಯ ಅದಕ್ಕೆ ಉತ್ತರ ಕೊಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತಿತ್ತು. ಇದೀಗ ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಸಿಟ್ಟಿನಿಂದ ಅವರು ಬಿಜೆಪಿಗೇ ಸೇರ್ಪಡೆಯಾಗಿರುವುದರಿಂದ, ಶ್ರೀನಿವಾಸ್ ಪ್ರಸಾದ್ ಕುರಿತಂತೆ ತಮ್ಮ ಕ್ರಮಕ್ಕೆ ಕಾಂಗ್ರೆಸ್‌ಸಮರ್ಥನೆಗೆ ಕಾರಣಗಳು ಸಿಕ್ಕಿವೆ. ಬಿಜೆಪಿ ಸೇರ್ಪಡೆಯಿಂದ ಶ್ರೀನಿವಾಸ್ ಪ್ರಸಾದ್ ತನ್ನ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದ್ದಾರೆ. ಈ ಮೂಲಕ ಅವರಿಗೆ ದೊರಕಬಹುದಾಗಿದ್ದ ಅಲ್ಪಸ್ವಲ್ಪ ಅನುಕಂಪವೂ ದೊರಕದಂತಾಗಿದೆ ಮತ್ತು ಶ್ರೀನಿವಾಸ್ ಪ್ರಸಾದ್‌ರನ್ನು ಟೀಕಿಸಲು ಕಾಂಗ್ರೆಸ್‌ಗೆ ಇನ್ನಷ್ಟು ವಿಷಯಗಳು ದೊರಕಿದಂತಾಗಿದೆ. ಶ್ರೀನಿವಾಸ್ ಪ್ರಸಾದ್ ಅವರ ರಾಜಕೀಯ ಇತಿಹಾಸದಲ್ಲಿ ನೋಡಿದರೆ ಇಂತಹದೊಂದು ಪ್ರಯತ್ನವನ್ನು ಅವರು ಈ ಹಿಂದೆಯೂ ಮಾಡಿದ್ದರು ಎನ್ನುವುದನ್ನು ನಾವು ಗಮನಿಸಬೇಕು.
ಎನ್‌ಡಿಎ ಸರಕಾರವಿದ್ದಾಗ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಇವರೂ ಎನ್‌ಡಿಎ ಸಂಗ ಮಾಡಿದ ಅನುಭವಿಗಳು ಮತ್ತು ಸಂದರ್ಭವನ್ನು ಬಳಸಿಕೊಂಡು ಅಧಿಕಾರವನ್ನೂ ಅನುಭವಿಸಿದರು. ಜಾರ್ಜ್ ಫೆರ್ನಾಂಡಿಸ್ ಬಳಿಕ ನೆಲೆ ಕಳೆದುಕೊಂಡ ಶ್ರೀನಿವಾಸ್ ಪ್ರಸಾದ್ ಅವರು ಜೆಡಿಎಸ್ ಸಹಿತ ಅತ್ತ-ಇತ್ತ ಎಂದು ಪಕ್ಷ ಬದಲಿಸಿ ಅಂತಿಮವಾಗಿ ಸಿದ್ದರಾಮಯ್ಯ ಅವರ ಅಹಿಂದದಲ್ಲಿ ನೆಲೆ ಪಡೆದುಕೊಂಡರು. ಮತ್ತು ಕಾಂಗ್ರೆಸ್‌ನಲ್ಲಿ ಆ ಕಾರಣದಿಂದಲೇ ಮಹತ್ವದ ಖಾತೆಯನ್ನೂ ತನ್ನದಾಗಿಸಿಕೊಂಡರು. ಆದರೆ ಆ ಖಾತೆಯನ್ನು ಕಳೆದುಕೊಳ್ಳುವಲ್ಲಿ ಸ್ವತಃ ಶ್ರೀನಿವಾಸ್ ಪ್ರಸಾದ್‌ರ ಪಾತ್ರವಂತೂ ಬಹುದೊಡ್ಡದಿದೆ. ಮುಖ್ಯವಾಗಿ ಅವರ ಆರೋಗ್ಯವೇ ಅವರಿಗೆ ಕೈಕೊಟ್ಟಿತ್ತು. ಇಡೀ ರಾಜ್ಯ ಬರದಿಂದ ಕಂಗೆಟ್ಟಿರುವಾಗ ಪ್ರವಾಸಗೈಯಬೇಕಾದ ಸಚಿವರು ಆಸ್ಪತ್ರೆಯಲ್ಲಿ ಮಲಗಿದ್ದರು. ಇದಾದ ಬಳಿಕವೂ ಅವರು ತನ್ನ ಖಾತೆಯನ್ನು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಜನರ ಪ್ರಶ್ನೆಗಳಿಗೆ ಮುಖ್ಯಮಂತ್ರಿಯೇ ಉತ್ತರಿಸಬೇಕಾದಂತಹ ಸನ್ನಿವೇಶ ಎದುರಾಯಿತು. ಸಿದ್ದರಾಮಯ್ಯ ಅವರ ಬಣದ ಕುರಿತಂತೆ ಮೊದಲೇ ಅಸಹನೆಯಿಂದ ಕುದಿಯುತ್ತಿದ್ದವರು ಇದನ್ನು ಪರಿಣಾಮಕಾರಿಯಾಗಿಯೇ ವರಿಷ್ಠರಿಗೆ ತಲುಪಿಸಿದರು. ಕಾರಣ, ಶ್ರೀನಿವಾಸ್ ಪ್ರಸಾದ್ ಅವರು ಖಾತೆ ಕಳೆದುಕೊಳ್ಳಬೇಕಾದಂತಹ ಸನ್ನಿವೇಶ ನಿರ್ಮಾಣವಾಯಿತು. ಅವರನ್ನು ಯಾವ ರೀತಿಯಲ್ಲೂ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರೂ ಇದ್ದಿರಲಿಲ್ಲ. ವಾಸ್ತವವನ್ನು ಒಪ್ಪಿಕೊಂಡು, ನಿರ್ಧಾರವನ್ನು ಸ್ವೀಕರಿಸುವುದರಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಎಲ್ಲ ರೀತಿಯಲ್ಲೂ ಒಳಿತಿತ್ತು.
ಆದರೆ ಶ್ರೀನಿವಾಸ್ ಪ್ರಸಾದ್ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ಅದನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಲು ಯತ್ನಿಸಿದರು. ಸಿದ್ದರಾಮಯ್ಯ ಅವರೊಂದಿಗೆ ವೈಯಕ್ತಿಕ ಜಿದ್ದು ಜಿದ್ದಿಗಿಳಿದರು. ಒಂದು ವೇಳೆ ಒಬ್ಬನನ್ನು ಖಾತೆಯಿಂದ ಇಳಿಸುವ ಅಥವಾ ಖಾತೆಗೆ ಆಯ್ಕೆ ಮಾಡುವ ಆಯ್ಕೆ ಪೂರ್ಣವಾಗಿ ಸಿದ್ದರಾಮಯ್ಯ ಅವರಿಗೆ ಇದ್ದಿದ್ದರೆ ಶ್ರೀನಿವಾಸ್ ಪ್ರಸಾದ್ ಉಳಿದುಕೊಳ್ಳುತ್ತಿದ್ದರೋ ಏನೋ.? ಇದಾದ ಬಳಿಕ ಶ್ರೀನಿವಾಸ್ ಪ್ರಸಾದ್ ತನ್ನ ಹಿರಿತನವನ್ನು ಉಳಿಸಿಕೊಳ್ಳದೇ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಟೀಕೆ ಮಾಡತೊಡಗಿದರು. ಅದನ್ನು ಟೀಕೆ ಎನ್ನುವುದಕ್ಕಿಂತ ನಿಂದನೆ ಎಂದರೇ ಒಳಿತು. ಸಿದ್ದರಾಮಯ್ಯ ಅವರಿಗೆ ಪಾಠ ಕಲಿಸಲೆಂದೇ ಅವರು ಬಿಜೆಪಿಯನ್ನೂ ಸೇರಿದ್ದಾರಂತೆ. ಇನ್ನೊಬ್ಬರ ಮೇಲಿನ ಸಿಟ್ಟಿನಿಂದ ಮೂಗನ್ನು ಕೊಯ್ದುಕೊಂಡರೆ ಅದರಿಂದ ನಷ್ಟ ಯಾರಿಗೆ? ಹೋಗಲಿ, ಕೊಯ್ದುಕೊಂಡ ಮೂಗು ಚಿಗುರುತ್ತದೆ ಎಂದಾಗಿದ್ದರೆ ಶ್ರೀನಿವಾಸ್ ಪ್ರಸಾದ್‌ರ ನಡೆಯನ್ನು ಸಮರ್ಥಿಸಿಕೊಳ್ಳಬಹುದಿತ್ತೇನೋ. ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯ ಸಂದರ್ಭದಲ್ಲಿ ‘ದಯವಿಟ್ಟು ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರಬೇಡಿ’ ಎಂದು ಗೋಗರೆದುಕೊಂಡಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ಸುದ್ದಿ. ಇದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಶ್ರೀನಿವಾಸ್ ಪ್ರಸಾದ್ ಅವರು ಕಾಂಗ್ರೆಸ್ ತೊರೆಯುತ್ತಿರುವುದು ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಕಾರಣದಿಂದ. ಇದೀಗ ಅವರು ಅವರು ಸೇರ್ಪಡೆಗೊಳ್ಳುತ್ತಿರುವ ಪಕ್ಷದ ಕುರಿತಂತೆಯೂ ಅವರಿಗೆ ಈ ಅನುಮಾನ ಇದ್ದಂತಿದೆ. ಆದುದರಿಂದಲೇ ಅವರು ಇಂತಹದೊಂದು ಕೋರಿಕೆಯನ್ನು ಮುಂದಿಟ್ಟಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅಂಬೇಡ್ಕರ್ ಅವರನ್ನು ಓದಿಕೊಂಡವರು.
‘‘ಎಲ್ಲಿ ನಿಮ್ಮ ಸ್ವಾಭೀಮಾನಕ್ಕೆ ಧಕ್ಕೆ ಬರುತ್ತದೆಯೋ ಅಲ್ಲಿ ನಿಮ್ಮ ಚಪ್ಪಲಿಯನ್ನೂ ಬಿಡಬೇಡಿ’’ ಎಂದು ಅಂಬೇಡ್ಕರ್ ದಲಿತರಿಗೆ ಕರೆ ನೀಡಿದ್ದು ಶ್ರೀನಿವಾಸ್ ಪ್ರಸಾದ್ ಅವರಿಗೆ ತಿಳಿಯದ್ದೇನಲ್ಲ. ಎಲ್ಲಿ ಸ್ವಾಭಿಮಾನಕ್ಕಾಗಿ ಗೋಗರೆಯಬೇಕೋ ಅಲ್ಲಿ ಶ್ರೀನಿವಾಸ್ ಪ್ರಸಾದ್ ಯಾಕೆ ಕಾಲಿಡಬೇಕು? ಇಷ್ಟಕ್ಕೂ ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಇರುವಂತೆಯೇ ಬಿಜೆಪಿಯಲ್ಲೂ ಇದೆ. ಈ ಹಿಂದೆ ಬಿಜೆಪಿಯನ್ನು ಸೇರ್ಪಡೆಗೊಂಡ ಬಂಗಾರಪ್ಪನವರ ಸ್ಥಿತಿ ಅಂತಿಮವಾಗಿ ಏನಾಯಿತು ಎನ್ನುವ ಉದಾಹರಣೆಯೂ ಶ್ರೀನಿವಾಸ್ ಪ್ರಸಾದ್ ಅವರ ಮುಂದಿದೆ. ಮುಖ್ಯವಾಗಿ ಕಾಂಗ್ರೆಸ್‌ನಿಂದ ಹೊರಬರುವುದಕ್ಕೆ ಶ್ರೀನಿವಾಸ್ ಪ್ರಸಾದ್ ನೀಡಿರುವ ಎಲ್ಲ ಕಾರಣಗಳೂ ಸಮರ್ಥನೀಯ ಎಂದೇ ಹೇಳೋಣ. ಯಾಕೆಂದರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಒಂದು ಹಾವಿನಿಂದ ಪಾರಾಗಲು ಇನ್ನೊಂದು ಅದಕ್ಕಿಂತಲೂ ಭಯಾನಕ ಹಾವಿನೊಂದಿಗೆ ಸಂಗ ಮಾಡುವುದು ಎಷ್ಟರ ಮಟ್ಟಿಗೆ ಮುತ್ಸದ್ದಿತನ ಎಂಬ ಪ್ರಶ್ನೆಗೆ ಶ್ರೀನಿವಾಸ್ ಪ್ರಸಾದ್ ಅವರೇ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
ಬಿಜೆಪಿ ಆರೆಸ್ಸೆಸ್‌ನ ರಾಜಕೀಯ ವಿಭಾಗ ಎನ್ನುವುದು ಗೊತ್ತಿಲ್ಲದಷ್ಟು ರಾಜಕೀಯ ಅಜ್ಞಾನಿ ಅವರಲ್ಲ. ಆರೆಸ್ಸೆಸ್‌ನ ತಳಹದಿ ಮನುವಾದಿ ಸಿದ್ಧಾಂತ. ಈ ಸಿದ್ಧಾಂತ ದಲಿತರನ್ನು ಯಾವ ಸ್ಥಾನದಲ್ಲಿ ಇಡಬೇಕೆಂದು ಬಯಸುತ್ತದೆ ಎನ್ನುವುದು ಕೂಡ ಶ್ರೀನಿವಾಸ್ ಪ್ರಸಾದ್ ಅವರಿಗೆ ಗೊತ್ತಿರುವ ವಿಷಯ. ಕಾಂಗ್ರೆಸ್‌ಗೆ ಹೈಕಮಾಂಡ್ ಸೋನಿಯಾ ಗಾಂಧಿಯಾಗಿದ್ದರೆ, ಬಿಜೆಪಿಯ ಹೈಕಮಾಂಡ್ ಮನು ಆಗಿದ್ದಾನೆ ಎನ್ನುವುದನ್ನು ಅವರು ಗಮನಿಸಬೇಕಾಗಿದೆ. ಮನುಸ್ಮತಿಯ ಜೊತೆಗೆ ‘ನನ್ನ ಸ್ವಾಭಿಮಾನಕ್ಕೆ ಧಕ್ಕೆ ತರದಂತೆ ನೋಡಿಕೊಳ್ಳಿ’ ಎಂದು ಶ್ರೀನಿವಾಸ್ ಪ್ರಸಾದ್‌ರಂತಹ ನಾಯಕರು ಗೋಗರೆಯುವುದೇ ಅಂಬೇಡ್ಕರ್ ಸಿದ್ಧಾಂತಕ್ಕೆ ಮಾಡಿದ ಅತಿ ದೊಡ್ಡ ಅವಮಾನವಾಗಿದೆ. ಅವರ ಸಮಯಸಾಧಕ ರಾಜಕಾರಣಕ್ಕೆ ಅತ್ಯುತ್ತಮ ಉದಾಹರಣೆಯೂ ಆಗಿದೆ. ಸದ್ಯದ ಮಟ್ಟಿಗೆ ಅವರಿಗೆ ಶತ್ರು ಸಿದ್ದರಾಮಯ್ಯ ಅವರೇ ಹೊರತು ಆರೆಸ್ಸೆಸ್ ಸಿದ್ಧಾಂತವಲ್ಲ. ಅವರಿಗೆ ಬೇಕಾಗಿರುವುದು ಸಿದ್ದರಾಮಯ್ಯ ಅವರ ಎದುರು ಚುನಾವಣೆಗೆ ನಿಲ್ಲಲು ಟಿಕೆಟ್ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ಯಾವುದಾದರೂ ಸ್ಥಾನ. ಆರೆಸ್ಸೆಸ್‌ಗೂ ಬೇಕಾಗಿರುವುದು ಅದೇ ಆಗಿದೆ. ಅಹಿಂದ ವಿರುದ್ಧ ಅಹಿಂದ ನಾಯಕನ್ನೇ ಬಳಸಿ ಇಬ್ಬರನ್ನೂ ಸೋಲಿಸುವ ಉದ್ದೇಶವನ್ನು ಅದು ಹೊಂದಿದೆ. ತನ್ನ ಮಗ ಸತ್ತರೂ ಪರವಾಗಿಲ್ಲ, ಸೊಸೆ ವಿಧವೆಯಾಗಬೇಕು ಎಂಬ ಮನಸ್ಥಿತಿಯಲ್ಲಿ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುತ್ತಿದ್ದಾರೆ. ತನ್ನ ಸ್ವಾರ್ಥಕ್ಕಾಗಿ ತನ್ನ ಸಮುದಾಯವನ್ನೇ ಬಲಿಪಶುಮಾಡಲು ಮುಂದಾಗಿದ್ದಾರೆ.
ಈಗ ನಮ್ಮ ಮುಂದೆ ಎದುರಾಗುತ್ತಿರುವ ಪ್ರಶ್ನೆ ಒಂದೇ. ಬಿಜೆಪಿಯಲ್ಲಿ ತೂರಿಕೊಂಡಿರುವ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಾಜಿ ದಲಿತ ನಾಯಕ, ಮಾಜಿ ಸಮಾಜವಾದಿ ಎಂಬೆಲ್ಲ ಕಾರಣಕ್ಕೆ ಗೌರವ ನೀಡುವವರು ಆರಂಭದಿಂದಲೂ ಬಿಜೆಪಿ ತತ್ವಕ್ಕೆ, ಸಿದ್ಧಾಂತಕ್ಕೆ ಬದ್ಧರಾಗಿ ಆ ಪಕ್ಷವನ್ನು ಕಟ್ಟಿ, ಉಳಿಸಿ, ಬೆಳೆಸಿದ ವಿ. ಎಎಸ್. ಆಚಾರ್ಯ, ಸುರೇಶ್ ಕುಮಾರ್‌ರಂಥ ಹಿರಿಯರಿಗೆ ಗೌರವ ನೀಡೋದು ಹೆಚ್ಚು ಉಚಿತ ಅಲ್ಲವೇ? ಯಾಕೆಂದರೆ ಈ ಹಿರಿಯರಿಂದಾಗಿ ತಾನೇ ಶ್ರೀನಿವಾಸ್ ಪ್ರಸಾದ್‌ರಂಥ ಜನರಿಗೆ ತೂರಿಕೊಳ್ಳಲು ಒಂದು ಜಾಗ ಸಿಕ್ಕಿರೋದು.!