×
Ad

ಆಸ್ಟ್ರೇಲಿಯದ ವರ್ಷದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ!

Update: 2016-12-27 23:31 IST

 ಮೆಲ್ಬೋರ್ನ್, ಡಿ.27: ಭಾರತದ ಡೈನಾಮಿಕ್ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಆಸ್ಟ್ರೇಲಿಯದ ವರ್ಷದ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದು, ಯುವ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರಿತ್ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕೊಹ್ಲಿ ಈ ಮೊದಲು ಐಸಿಸಿ ಏಕದಿನ ವರ್ಷದ ಕ್ರಿಕೆಟ್ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸ್ಟೀವನ್ ಸ್ಮಿತ್‌ರನ್ನು ಹಿಂದಕ್ಕೆ ತಳ್ಳಿದ ಕೊಹ್ಲಿ ಕ್ರಿಕೆಟ್ ಆಸ್ಟ್ರೇಲಿಯದ ನಾಯಕನಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು.

ಭಾರತದ ನಾಯಕ ಕೊಹ್ಲಿ ಈ ವರ್ಷ ಕೇವಲ 10 ಏಕದಿನ ಪಂದ್ಯಗಳನ್ನು ಆಡಿದ್ದರೂ 50 ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಈ ವರ್ಷ ಆಡಿರುವ 10 ಇನಿಂಗ್ಸ್‌ಗಳಲ್ಲಿ 42ಕ್ಕೂ ಅಧಿಕ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಸತತ ಶತಕ ಸಿಡಿಸಿ ರನ್ ಮಳೆ ಹರಿಸಿದ್ದರು. ನ್ಯೂಝಿಲೆಂಡ್ ವಿರುದ್ಧ ಅಜೇಯ 154 ರನ್ ಗಳಿಸಿದ್ದರು.ಭಾರತ ರನ್ ಬೆನ್ನಟ್ಟುವಾಗ ಕೊಹ್ಲಿ 90.10ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು ಎಂದು ಕ್ರಿಕೆಟ್ ಆಸ್ಟ್ರೇಲಿಯ ತಿಳಿಸಿದೆ.

ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಈ ವರ್ಷ 17 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದಾರೆ. 3.63 ಇಕಾನಮಿ ರೇಟ್‌ನಲ್ಲಿ ಬೌಲಿಂಗ್ ಮಾಡಿ ಮಿತವ್ಯಯಿ ಎನಿಸಿಕೊಂಡಿದ್ದಾರೆ.

ಕ್ರಿಕೆಟ್ ಆಸ್ಟ್ರೇಲಿಯದ ವರ್ಷದ ಏಕದಿನ ತಂಡ:

ವಿರಾಟ್ ಕೊಹ್ಲಿ(ಭಾರತ, ನಾಯಕ), ಡೇವಿಡ್ ವಾರ್ನರ್(ಆಸ್ಟ್ರೇಲಿಯ), ಕ್ವಿಂಟನ್ ಡಿಕಾಕ್(ವಿ.ಕೀ.) ಸ್ಟೀವ್ ಸ್ಮಿತ್(ಆಸ್ಟ್ರೇಲಿಯ), ಬಾಬರ್ ಆಝಂ(ಪಾಕಿಸ್ತಾನ), ಮಿಚೆಲ್ ಮಾರ್ಷ್(ಆಸ್ಟ್ರೇಲಿಯ), ಜೋಸ್ ಬಟ್ಲರ್(ಇಂಗ್ಲೆಂಡ್), ಜಸ್‌ಪ್ರಿತ್ ಬುಮ್ರಾ(ಭಾರತ), ಇಮ್ರಾನ್ ತಾಹಿರ್(ದ.ಆಫ್ರಿಕ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News