ಭದ್ರತಾ ಮಂಡಳಿ ನಿರ್ಣಯ ಬೆಂಬಲಿಸಿದ ದೇಶಗಳ ಜೊತೆ ಕಡಿಮೆ ಬಾಂಧವ್ಯ: ಇಸ್ರೇಲ್
ಜೆರುಸಲೇಂ,ಡಿ.27: ಫೆಲೆಸ್ತೀನ್ ಪ್ರಾಂತದಲ್ಲಿ ಯೆಹೂದಿ ವಸಾಹತುಗಳ ನಿರ್ಮಾಣವನ್ನು ಸ್ಥಗಿತಗೊಳಿಸಬೇಕೆಂದು ಇಸ್ರೇಲನ್ನು ಆಗ್ರಹಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಳೆದ ವಾರ ಅಂಗೀಕರಿಸಿದ ನಿರ್ಣಯವನ್ನು ಬೆಂಬಲಿಸಿದ ದೇಶಗಳ ಜೊತೆಗಿನ ನಂಟನ್ನು ಕಡಿಮೆಗೊಳಿಸಲಾಗುವುದೆಂದು ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ ಘೋಷಿಸಿದೆ.
ನಿರ್ಣಯವನ್ನು ಬೆಂಬಲಿಸಿದ ದೇಶಗಳಿಗೆ ಭೇಟಿ ನೀಡುವುದನ್ನು ರದ್ದುಪಡಿಸುವುದರಿಂದ ಇಸ್ರೇಲ್‌ಗೆ ತನ್ನ ನಿಲುವಿನ ಬಗ್ಗೆ ವಿವರಣೆ ನೀಡುವ ಅವಕಾಶ ತಪ್ಪಲಿದೆ. ಆದರೆ ಇಸ್ರೇಲನ್ನು ತಮಗಿಷ್ಟ ಬಂದಂತೆ ನಡೆಸಿಕೊಳ್ಳಲು ಸಾಧ್ಯವಿಲ್ಲವೆಂಬುದು ಇದರಿಂದ ಸ್ಪಷ್ಟವಾಗಲಿದೆಯೆಂದು ಉಪವಿದೇಶಾಂಗ ಸಚಿವೆ ಝಿಪಿ ಹೊಟೊವ್ಲಿ ಹೇಳಿದ್ದಾರೆ. ಆದರೆ ಆ ದೇಶಗಳ ಜೊತೆಗಿನ ಬಾಂಧವ್ಯಗಳನ್ನು ಇಸ್ರೇಲ್ ಅಮಾನತಿನಲ್ಲಿಟ್ಟಿದೆಯೆಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಟ, ಸೈಬರ್ ಸುರಕ್ಷತೆ ಹಾಗೂ ಕೃಷಿ ತಂತ್ರಜ್ಞಾನಗಳನ್ನು ಕಲಿಯುವುದಕ್ಕಾಗಿ ಇನ್ನು ಮುಂದೆ ಇಸ್ರೇಲ್‌ಗೆ ‘ತೀರ್ಥಯಾತ್ರೆ’ ಕೈಗೊಳ್ಳಲು ಈ ದೇಶಗಳಿಗೆ ಸಾಧ್ಯವಾಗದು ಎಂದವರು ವ್ಯಂಗ್ಯವಾಡಿದ್ದಾರೆ. ನಿರ್ಣಯದ ಪರವಾಗಿ ಮತಚಲಾಯಿಸಿದ ದೇಶಗಳಿಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ವಿದೇಶಾಂಗ ಖಾತೆಯನ್ನೂ ನಿರ್ವಹಿಸುತ್ತಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ತನ್ನ ದೇಶದ ಅಧಿಕಾರಿಗಳಿಗೆ ಕರೆ ನೀಡಿದ್ದರೆಂದು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.