ಪ್ರಧಾನಿ ಹುದ್ದೆಗೆ ಮುಸ್ಲಿಮ್ ಮಹಿಳಾ ಅಭ್ಯರ್ಥಿಯನ್ನು ತಿರಸ್ಕರಿಸಿದ ರೊಮಾನಿಯಾ ಅಧ್ಯಕ್ಷ
ರೊಮಾನಿಯಾ, ಡಿ.28: ಎಡಪಂಥೀಯ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಪ್ರಧಾನಿ ಅಭ್ಯರ್ಥಿ ಸೆವಿಲ್ ಶಾಯಿದಾ ಅವರ ಉಮೇದುವಾರಿಕೆಯನ್ನು ರೊಮಾನಿಯಾ ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಈ ಮೂಲಕ ಯುರೋಪಿಯನ್ ಒಕ್ಕೂಟದ ಸದಸ್ಯ ದೇಶಗಳ ಪೈಕಿ ಮೊಟ್ಟಮೊದಲ ಮಹಿಳಾ ಹಾಗೂ ಮುಸ್ಲಿಮ್ ಪ್ರಧಾನಿಯಾಗುವ ಅವಕಾಶದಿಂದ ವಂಚಿತರಾಗಿದ್ದಾರೆ.
ಅಧ್ಯಕ್ಷ ಕ್ಲಾಸ್ ಲೊಹಾನೀಸ್ ಅವರು ಸೆವಿಲ್ ಶಾಯಿದಾ ಉಮೇದುವಾರಿಕೆಯನ್ನು ತಿರಸ್ಕರಿಸಲು ಕಾರಣ ನೀಡಿಲ್ಲ. ಟರ್ಕಿ ಮೂಲದ 52 ವರ್ಷದ ಶಾಯಿದಾ, ರೊಮಾನಿಯಾದಲ್ಲಿ 65 ಸಾವಿರದಷ್ಟಿರುವ ಮುಸ್ಲಿಮ್ ಸಮುದಾಯದಿಂದ ಬಂದವರು. "ಪರ ಹಾಗೂ ವಿರೋಧದ ವಾದಗಳನ್ನು ಸಮರ್ಪಕವಾಗಿ ಆಲಿಸಿ, ಶಾಯಿದಾ ಅವರ ನಾಮಪತ್ರವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ" ಎಂದು ಕ್ಲಾಸ್ ಲೊಹಾನೀಸ್ ಹೇಳಿಕೆ ನೀಡಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಪಕ್ಷಕ್ಕೆ ಬೇರೆ ಪ್ರಧಾನಿ ಅಭ್ಯರ್ಥಿಯನ್ನು ಸೂಚಿಸುವಂತೆ ಕೋರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಡಿಸೆಂಬರ್ 11ರಂದು ನಡೆದ ಚುನಾವಣೆಯಲ್ಲಿ ಶೇಕಡ 45ರಷ್ಟು ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ, ಶಾಯಿದಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಸೂಚಿಸಿತ್ತು.
ಸೋಶಿಯಲ್ ಡೆಮಾಕ್ರಟಿಕ್ ಪಕ್ಷವು ತನ್ನ ಮೈತ್ರಿಕೂಟದ ಕಿರಿಯ ಪಾಲುದಾರ ಹಾಗೂ ಧೀರ್ಘಕಾಲದ ಮಿತ್ರಪಕ್ಷವಾದ ಎಎಲ್‌ಡಿಇ ಜತೆ ಸೇರಿ 465 ಸದಸ್ಯರ ಸಂಸತ್ತಿನಲ್ಲಿ 250 ಸದಸ್ಯಬಲ ಹೊಂದಿದೆ. ಇದರಿಂದ ಈ ಮೈತ್ರಿಕೂಟದ ಅಭ್ಯರ್ಥಿ ಪ್ರಧಾನಿಯಾಗುವುದು ಖಚಿತ.