×
Ad

ಆತ 25 ವರ್ಷಗಳಿಂದ ಬಳಸುತ್ತಿದ್ದ ಉಪಕರಣ ಹ್ಯಾಂಡ್ ಗ್ರೆನೇಡ್ ಎಂದು ಗೊತ್ತಾದಾಗ...

Update: 2016-12-28 10:24 IST

ಶಾಂಘಾಯ್, ಡಿ.28 : ಚೀನಾದ ಶಾಂಗ್ಝಿ ಪ್ರಾಂತ್ಯದ ಅನ್ಕಾಂಗ್ ಎಂಬ ಗ್ರಾಮದ ವ್ಯಕ್ತಿಗೆ ಇತ್ತೀಚೆಗೆ ಭಾರೀ ಆಘಾತವೇ ಕಾದಿತ್ತು. ಆತ ಕಳೆದ 25 ವರ್ಷಗಳಿಂದ ಕಾಯಿಗಳನ್ನು ಒಡೆಯಲು ಬಳಸುತ್ತಿದ್ದ ಉಪಕರಣವೊಂದು ಹ್ಯಾಂಡ್ ಗ್ರೆನೇಡ್ ಎಂದು ತಿಳಿದು ಬಂದಾಗ ರಾನ್ ಎಂಬ ಆ ವ್ಯಕ್ತಿಯ ಜಂಘಾಬಲವೇ ಉಡುಗಿ ಹೋಗಿತ್ತು. ಈ ವಿಚಾರ ಇತ್ತೀಚೆಗೆ ಚೀನಾದ ಮಾಧ್ಯಮದಲ್ಲೂ ಬಹಳಷ್ಟು ಸುದ್ದಿಯಾಗಿದೆ.

ಇತ್ತೀಚೆಗೆ ರಾನ್ ವಾಸಿಸುವ ಗ್ರಾಮದ ಪೊಲೀಸರು ಗ್ರಾಮಸ್ಥರಲ್ಲಿ ಅವರಲ್ಲಿರುವ ಅನಧಿಕೃತ ಉಪಕರಣಗಳ ಬಗ್ಗೆ ಮಾಹಿತಿ ಕೇಳಿದ್ದರು. ಆಗ ರಾನ್ ತನ್ನಲ್ಲಿರುವ ಕಾಯಿ ಒಡೆಯಲು ಬಳಸುವ ಉಪಕರಣವನ್ನು ಪೊಲೀಸರ ಮುಂದೆ ಹಾಜರುಪಡಿಸಿದ್ದನು. ಅದನ್ನು ಪರಿಶೀಲಿಸಿದ ಪೊಲೀಸರು ಅದೊಂದು ಹ್ಯಾಂಡ್ ಗ್ರೆನೇಡ್ ಎಂದು ಹೇಳಿ ಬಿಟ್ಟರು. ಹೀಗಾಗಬಹುದೆಂದು ಆತ ಊಹಿಸಿರಲೇ ಇಲ್ಲ.

ಸದ್ಯ ಈ ಹ್ಯಾಂಡ್ ಗ್ರೆನೇಡ್ ನಿಷ್ಕ್ರಿಯವಾಗಿದೆಯೇ ಅಥವಾ ಈಗಲೂ ಅದನ್ನು ಉಪಯೋಗಿಸಬಹುದೇ ಎಂಬಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹ್ಯಾಂಡ್ ಗ್ರೆನೇಡ್ 1960ರ ದಶಕದ್ದಾಗಿರಬಹುದೆಂದು ಅಂದಾಜಿಸಲಾಗಿದ್ದು. ಈ ಉಪಕರಣವನ್ನು ಆತನಿಗೆ 1991ರಲ್ಲಿ ಯಾರೋ ಉಡುಗೊರೆಯಾಗಿ ನೀಡಿದ್ದರೆಂದು ಆತ ಹೇಳುತ್ತಿದ್ದಾನಾದರೂ ಯಾರು ಎಲ್ಲಿ ಈ ಉಪಕರಣವನ್ನು ತನಗೆ ಕೊಟ್ಟರು ಎಂಬುದು ನೆನಪಿಲ್ಲ ಎನ್ನುತ್ತಾನಾತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News