ಎಐಎಡಿಎಂಕೆಯಲ್ಲಿ ಹಿಂಸೆಗೆ ತಿರುಗಿದ ಶಶಿಕಲಾ v/s ಶಶಿಕಲಾ

Update: 2016-12-28 10:36 GMT

 ಹೊಸದಿಲ್ಲಿ, ಡಿ.28: ಉಚ್ಚಾಟಿತ ಎಐಎಡಿಎಂಕೆ ರಾಜ್ಯಸಭಾ ಸದಸ್ಯೆ ಶಶಿಕಲಾ ಪುಷ್ಪಾ ಪಕ್ಷದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ವೇಳೆ ಪಕ್ಷದ ಎರಡು ಬಣಗಳ ನಡುವೆ ಭಾರೀ ಹೊಡೆದಾಟ ನಡೆದ ಘಟನೆ ಗುರುವಾರ ಇಲ್ಲಿ ನಡೆದಿದೆ.

ಶಶಿಕಲಾ ಇಲ್ಲಿನ ರೊಯಪೇಟದಲ್ಲಿರುವ ಎಐಎಡಿಎಂಕೆ ಮುಖ್ಯ ಕಚೇರಿಗೆ ಪತಿ ಲಿಂಗೇಶ್ವರನ್ ತಿಲಕನ್, ವಕೀಲರು ಹಾಗೂ ಬೆಂಬಲಿಗರ ಪಡೆಯೊಂದಿಗೆ ಆಗಮಿಸಿದ್ದರು. ಶಶಿಕಲಾ ನಟರಾಜನ್ ಬಣದ ಕಾರ್ಯಕರ್ತರು ಶಶಿಕಲಾರ ಪತಿ ಲಿಂಗೇಶ್ವರನ್ ಹಾಗೂ ವಕೀಲರಿಗೆ ರಕ್ತ ಸೋರುವ ತನಕ ಹಲ್ಲೆ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಶಶಿಕಲಾ ಪರ ವಕೀಲರು ಕಾರ್ಯಕರ್ತರ ದಾಳಿಗೆ ತುತ್ತಾಗಿದ್ದಾರೆ.

ಶಶಿಕಲಾ ಪುಷ್ಪಾ ಬಣದವರು ಈ ಹಿಂದೆ ಜಯಲಲಿತಾರ ವಿರುದ್ಧ ಹೇಳಿಕೆ ನೀಡಿ ಕಾರ್ಯಕರ್ತರನ್ನು ಕೆರಳಿಸಿದ್ದಾರೆ ಎಂದು ಎಐಎಡಿಎಂಕೆ ವಕ್ತಾರೆ ಸರಸ್ವತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

  ಪಕ್ಷದ ಮುಖ್ಯ ಕಾರ್ಯದರ್ಶಿಯನ್ನು ಆಯ್ಕೆ ಮಾಡಲು ಪಾರ್ಟಿಯ ಸಾಮಾನ್ಯ ಕೌನ್ಸಿಲ್ ಹಾಗೂ ಕಾರ್ಯಕಾರಿಣಿ ಸಭೆ ಗುರುವಾರ ಇಲ್ಲಿ ನಿಗದಿಯಾಗಿದ್ದು, ಜಯಲಲಿತಾರ ಆಪ್ತೆ ಶಶಿಕಲಾ ನಟರಾಜನ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಶಶಿಕಲಾ ನಟರಾಜನ್ ಈ ಹುದ್ದೆಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಪಕ್ಷದ ಕೌನ್ಸಿಲ್ ಸಭೆಯ ಮುನ್ನಾದಿನ ಈ ಅಹಿತಕರ ಘಟನೆ ನಡೆದಿದೆ.

ಹೊಸದಿಲ್ಲಿಯ ಏರ್‌ಪೋರ್ಟ್‌ನಲ್ಲಿ ಡಿಎಂಕೆ ಎಂಪಿ ತ್ರಿಚಿ ಶಿವಾರೊಂದಿಗೆ ವಾಗ್ವಾದ ನಡೆಸಿದ್ದ ಶಶಿಕಲಾ ಪುಷ್ಪಾರನ್ನು ಕಳೆದ ಜುಲೈನಲ್ಲಿ ಎಐಎಡಿಎಂಕೆ ತನ್ನ ಪಕ್ಷದಿಂದ ಉಚ್ಚಾಟಿಸಿತ್ತು.

ಜಯಲಲಿತಾ ನಿಧನದ ಬಳಿಕ ಶಶಿಕಲಾ ನಟರಾಜನ್ ಎಐಎಡಿಎಂಕೆ ಕಾರ್ಯದರ್ಶಿಯಾಗಿ ಆಯ್ಕೆಯಾಗುವುದನ್ನು ಪ್ರಶ್ನಿಸಿ ಶಶಿಕಲಾ ಪುಷ್ಪಾ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

 ಜಯಲಲಿತಾರನ್ನು ನೋಡಲು ಅಪೊಲೊ ಆಸ್ಪತ್ರೆಯೊಳಗೆ ಯಾರನ್ನೂ ಬಿಟ್ಟಿಲ್ಲ. ಅವರ ಸಾವು ಸಂಶಯಾಸ್ಪದವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದ ಶಶಿಕಲಾ ಪುಷ್ಪಾ ಜಯಲಲಿತಾರ ಸಾವಿನ ಬಗ್ಗೆ ನ್ಯಾಯಾಂಗ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News