ಸಿರಿಯ: ವೈಮಾನಿಕ ಬಾಂಬ್ ದಾಳಿಗೆ 10 ಮಕ್ಕಳ ಸಹಿತ 22 ನಾಗರಿಕರ ಮೃತ್ಯು
Update: 2016-12-28 21:48 IST
ಬೈರೂತ್(ಲೆಬನಾನ್),ಡಿ.28: ಅಜ್ಞಾತ ವಿಮಾನವೊಂದು ನಡೆಸಿದ ವಾಯು ದಾಳಿಯಲ್ಲಿ ಪೂರ್ವ ಸಿರಿಯದ ಐಸಿಸ್ ಅಧೀನದಲ್ಲಿರುವ ಗ್ರಾಮವೊಂದರಲ್ಲಿ 10 ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 22 ಮಂದಿ ನಾಗರಿಕರು ಮೃತಪಟ್ಟಿದ್ದಾರೆ.
ಇರಾಕ್ ಗಡಿಯಲ್ಲಿರುವ ದೇರ್ ಎರ್ಝೊರ್ ಪ್ರಾಂತದ ಹೊಜ್ನಾ ಪಟ್ಟಣದಲ್ಲಿ ಈ ದಾಳಿ ನಡೆದಿದೆ. ತೈಲ ಸಮೃದ್ಧ ದೇರ್ ಎರ್ಝೊರ್ ಪ್ರಾಂತ್ಯವು ಐಸಿಸ್‌ನ ಸಂಪೂರ್ಣ ನಿಯಂತ್ರಣದಲ್ಲಿದ್ದು, ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟವು ಅದನ್ನು ಗುರಿಯಾಗಿಸಿ ನಿರಂತರವಾಗಿ ವಾಯುದಾಳಿಯನ್ನು ನಡೆಸುತ್ತಿದೆ.
ಈ ಪ್ರಾಂತದ ರಾಜಧಾನಿಯ ಹೆಸರು ಕೂಡಾ ದೇರ್ ಎರ್ಝೊರ್ ಆಗಿದ್ದು, ಅದು ಮಾತ್ರ ಪೂರ್ವ ಸಿರಿಯದಲ್ಲಿ ಐಸಿಸ್‌ನ ನಿಯಂತ್ರಣದಲ್ಲಿರದ ಏಕೈಕ ನಗರವಾಗಿದೆ. ಈ ನಗರವು ಸಿರಿಯ ಅಧ್ಯಕ್ಷ ಬಶೀರ್ ಅಲ್ ಅಸ್ಸಾದ್ ಅವರಿಗೆ ನಿಷ್ಠರಾದ ಸೇನಾಪಡೆಗಳ ವಶದಲ್ಲಿದೆ.