ಭಾರತ ಜಗತ್ತಿನ ನಂ.2 ಶಸ್ತ್ರಾಸ್ತ್ರ ಗ್ರಾಹಕ ರಾಷ್ಟ್ರ

Update: 2016-12-28 16:30 GMT

ವಾಶಿಂಗ್ಟನ್,ಡಿ.28: ಸೌದಿ ಆರೇಬಿಯದ ಬಳಿಕ ಭಾರತವು ಜಗತ್ತಿನ ಎರಡನೆ ಅತಿ ದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ರಾಷ್ಟ್ರವಾಗಿ ಹೊರಹೊಮ್ಮಿದೆಯೆಂದು ಅಮೆರಿಕ ಕಾಂಗ್ರೆಸ್‌ನ ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ.

2008-2015ರ ಅವಧಿಗೆ ಭಾರತವು 34 ಬಿಲಿಯನ್ ಡಾಲರ್ ವೌಲ್ಯದ ರಕ್ಷಣಾ ಉಪಕರಣಗಳನ್ನು ಖರೀದಿಸಿದೆ. ಇದೇ ಅವಧಿಯಲ್ಲಿ ಬರೋಬ್ಬರಿ 93.5 ಶತಕೋಟಿ ಡಾಲರ್ ವೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ಸೌದಿ ಆರೇಬಿಯ, ವಿಶ್ವದ ಅತಿ ದೊಡ್ಡ ಶಸ್ತ್ರಾಸ್ತ್ರ ಗ್ರಾಹಕ ರಾಷ್ಟ್ರವಾಗಿ ಮೊದಲ ಸ್ಥಾನದಲ್ಲಿದೆಯೆಂದು ಎಂದು ಅಮೆರಿಕ ಕಾಂಗ್ರೆಸ್‌ನ ಸಂಸದೀಯ ಸಂಶೋಧನಾ ಸಮಿತಿ (ಸಿಆರ್‌ಎಸ್) ಬಿಡುಗಡೆ ಗೊಳಿಸಿರುವ ‘ಅಭಿವೃದ್ಧಿಶೀಲ ದೇಶಗಳಿಗೆ ಸಾಂಪ್ರದಾಯಿಕ ಶಸ್ತ್ರಾಸ್ತ್ರ ವರ್ಗಾವಣೆ 2008-2015’ ವರದಿ ತಿಳಿಸಿದೆ.

ವೈವಿಧ್ಯಮಯ ಶಸ್ತ್ರಾಸ್ತ್ರಗಳನ್ನು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಭಾರತವು ನಡೆಸುತ್ತಿರುವ ತೀವ್ರ ಪ್ರಯತ್ನಗಳ ಬಗ್ಗೆಯೂ ವರದಿ ಬೆಳಕುಚೆಲ್ಲಿದೆ. ಭಾರತವು ಶಸ್ತ್ರಾಸ್ತ್ರಗಳ ಖರೀದಿಸುವುದರಿಂದ ಅಮೆರಿಕವು ಅತಿ ದೊಡ್ಡ ಫಲಾನುಭವಿ ರಾಷ್ಟ್ರವಾಗಿದೆಯೆಂದು ಅದು ಹೇಳಿದೆ.

ರಶ್ಯ ನಿರ್ಮಿತ ಶಸ್ತ್ರಾಸ್ತ್ರಗಳ ಪ್ರಮುಖ ಗ್ರಾಹಕನಾಗಿದ್ದ ಭಾರತವು ಇತ್ತೀಚಿನ ವರ್ಷಗಳಲ್ಲಿ ತನ್ನ ಶಸ್ತ್ರಾಸ್ತ್ರ ಪೂರೈಕೆ ನೆಲೆಗಳನ್ನು ವಿಸ್ತರಿಸಿಕೊಂಡಿದೆ. 2004ರಲ್ಲಿ ಇಸ್ರೇಲ್‌ನಿಂದ ಕ್ಷಿಪ್ರ ಮುನ್ನೆಚ್ಚರಿಕೆ ರಕ್ಷಣಾ ವ್ಯವಸ್ಥೆ ವಿಮಾನ ‘ಫಾಲ್ಕನ್’ ಹಾಗೂ ಫ್ರಾನ್ಸ್‌ನಿಂದ 2005ರಲ್ಲಿ ಡೀಸೆಲ್ ಚಾಲಿತ .‘ಸ್ಕಾರ್ಪಿನ್’ ಜಲಾಂತರ್ಗಾಮಿಗಳು ಸೇರಿದಂತೆ ಹಲವಾರು ರಕ್ಷಣಾ ಉಪಕರಣಗಳನ್ನು ಖರೀದಿಸಿದೆ. 2008ರಲ್ಲಿ ಭಾರತವು ಅಮೆರಿಕದಿಂದ ಆರು ಸಿ130ಜೆ ಕಾರ್ಗೊ ವಿಮಾನವನ್ನು ಖರೀದಿಸಿದೆ ಎಂದು ಸಿಆರ್‌ಎಸ್ ತಿಳಿಸಿದೆ.

III 2010ರಲ್ಲಿ ಬ್ರಿಟನ್ ಭಾರತಕ್ಕೆ 1 ಶತಕೋಟಿ ಡಾಲರ್ ವೌಲ್ಯದ 57 ಹಾಕ್ ಜೆಟ್ ಟ್ರೈನರ್ ವಿಮಾನಗಳನ್ನು ಮಾರಾಟ ಮಾಡಿದೆ. 2010ರಲ್ಲಿ ಇಟಲಿ ಕೂಡಾ ಭಾರತಕ್ಕೆ 12 ಎಡಬ್ಲು101 ಹೆಲಿಕಾಪ್ಟರ್‌ಗಳನ್ನು ಮಾರಾಟ ಮಾಡಿತ್ತು. 2011ರಲ್ಲಿ ಭಾರತವು ತನ್ನ 51 ಮಿರೇಜ್-2000 ಫೈಟರ್ ವಿಮಾನಗಳನ್ನು ಉನ್ನತೀಕರಿಸಲು ಫ್ರಾನ್ಸ್ ಜೊತೆ 2.4 ಶತಕೋಟಿ ಡಾಲರ್ ವೌಲ್ಯದ ಒಪ್ಪಂದಕ್ಕೆ ಸಹಿಹಾಕಿತ್ತು. ಭಾರತವು ಅಮೆರಿಕದಿಂದ 10 ಸಿ-17 ಗ್ಲೋಬ್‌ಮಾಸ್ಟರ್ ವಿಮಾನವನ್ನು 4.1 ಶತಕೋಟಿ ಡಾಲರ್ ಮೊತ್ತದಲ್ಲಿ ಖರೀದಿಸಿತ್ತು.

ಭಾರತದ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ರಶ್ಯಕ್ಕೆ ಜಗತ್ತಿನ ಇತರ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರರಿಂದ ಪ್ರಬಲವಾದ ಸ್ಪರ್ಧೆ ಎದುರಿಸುತ್ತಿರುವುದು ಇದರಿಂದ ನಿಚ್ಚಳವಾಗಿದೆ. ತನ್ನಿಂದ ಭಾರತವು ಪ್ರಮುಖ ಯುದ್ಧೋಪಕರಣಗಳನ್ನು ಖರೀದಿಸುವುದೆಂಬ ಭರವಸೆಯನ್ನು ಇನ್ನು ಮುಂದೆ ರಶ್ಯವು ಇಟ್ಟುಕೊಳ್ಳಲು ಸಾಧ್ಯವಿಲ್ಲವೆಂದು ಸಿಆರ್‌ಎಸ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News